ಗುರುವಾರ, 29 ಜೂನ್ 2023
ಕ್ರಷ್ಣಮೂರ್ತಿಯವರ ಮನೆ, ಬಸವೇಶ್ವರನಗರ, ಬೆಂಗಳೂರು.
ಅದೊಂದು ಇನ್ನೊಂದು ಸಮಾನ ಮನಸ್ಕರ ಒಟ್ತ್ತಾಗುವಿಕೆ....(get-together)ಅಲ್ಲಿ ಇದ್ದವರು.......
ಕೃಷ್ಣಮೂರ್ತಿ ಚಿಕ್ಕೆನಹಳ್ಳಿ
ಶ್ರೀಪಾದ ರಾವ್ ಮಂಜುನಾಥ್
ಸಿ. ಜಿ. ಶಶಿಧರನ್,
ಜಯರಾಮ ಸೋಮಯಾಜಿ
ನಳಿನಿ ಸೋಮಯಾಜಿ
ಶ್ರೀಪಾದ್ ರಾವ್ ಮಂಜುನಾಥ್ ಅವರು ಪ್ರಾರಂಭಿಸಿದ "ಸ್ನೇಹ ಸ್ನೇತು" ವಿನ ಮುಂದುವರಿದ ಭಾಗ.
ಮಂಜಣ್ಣ ಅವರ ಪ್ರೀತಿಯ ನಾಯಿ "ಬಬ್ಲಿ" ಯನ್ನು ನೆನ್ನೆ ಯಸ್ತೆ ಕಳಕೊಂಡ ದುಃಖ, ಬೇಸರ. ಅದಕ್ಕೆ ಚಿರ ಶಾಂತಿ ದೊರೆಯಲಿ ಎಂದು ಪ್ರಾರ್ಥನೆ.
ಹತ್ತು ವರ್ಷಗಳಿಂದ ಅವರಿಗೆ ಮನೆಯ ಸದಸ್ಯನಾಗಿದ್ದು ಈಗ ಅವರಿಗೆ ಅಪಾರವಾದ ವ್ಯಥೆ....
ಸುಮಾರು ಎರಡು ಗಂಟೆಗಳ ಕಾಲ, ಸಾಹಿತ್ಯ, ಆಧ್ಯಾತ್ಮ, ಹಾಡುಗಳ ವಿನಿಮಯ.ಪುಸ್ತಕ ಪರಿಚಯ...
ಚಿಂತನೆಗಳ ಚಿತ್ತಾರ - ಸಿ.ಜಿ. ಶಶಿಧರನ್
ಈ ಹೊತ್ತಿನ ಕವಿತೆಗಳು - ಚಿಕ್ಕೆನಹಳ್ಳಿ ಕ್ರಷ್ಣಮೂರ್ತಿ.
ಕ್ರಷ್ಣಮೂರ್ತಿಯವರ ರವ ಇಡ್ಲಿ, ಕಾಪಿ, ನಳಿನಿ ಯವರ ಪಡ್ದು, ಫಲಾಹಾರ ದೊಂದಿಗೆ ಅಂದಿನ ಸಭೆ ಮುಕ್ತಾಯ ಗೊಂಡಿತು.
9 ಗಂಟೆಗೆ ಮನೆಗೆ....ಶ್ರೀಪಾದ್ ರಾವ್ ಮಂಜುನಾಥ್ ಇವರ ಬರಹ:
ನೀವು ( ಶ್ರೀಮತಿ ನಳಿನಿ ಸೋಮಯಾಜಿ, ಶ್ರೀಯುತ ಜಯರಾಮ ಸೋಮಯಾಜಿ, ಶ್ರೀಯುತ ಕೃಷ್ಣಮೂರ್ತಿ ಚಿಕ್ಕನಹಳ್ಳಿ, ಶ್ರೀಯುತ ಸಿ.ಜಿ. ಶಶಿಧರನ್ ) ನೆನ್ನೆ ಒದಗಿಸಿದ ಅದ್ಭುತ ಕ್ಷಣಗಳನು ನಾ ಮರೆಯಲಾರೆ. ನನ್ನ ಮೆಚ್ಚಿನ (ಬಬ್ಲಿಯ) ಅಗಲಿಕೆಯ ನೋವಿನಲ್ಲಿದ್ದ ನನ್ನ ಮನಸ್ಸನ್ನು ಹಗುರಗೊಳಿಸಿತು. ಇದಕ್ಕಾಗಿ ನೀವಿತ್ತ ಸಮಯಕ್ಕೆ ನಾನು ಆಭಾರಿಯಾಗಿದ್ದೇನೆ.
ಸುಮಾರು ಎರಡು ಗಂಟೆಗಳು ಕಳೆದದ್ದು ಗೊತ್ತಾಗಲೇಯಿಲ್ಲ. ನಿಮ್ಮ ಉತ್ಸಾಹಭರಿತ ಪಾಲ್ಗೊಳ್ಳುವಿಕೆ ಈ ತಿಂಗಳ ಕಾರ್ಯಕ್ರಮವನ್ನು ಮೇಲ್ಮಟ್ಟಕ್ಕೂಯ್ಯಿತು. ಈ ಸಂದರ್ಭದಲ್ಲಿ ಅದ್ಭುತವಾದ ತಿನಿಸುಗಳನ್ನು ಒದಗಿಸಿದ ನಿಮಗೆಲ್ಲರಿಗೂ ಮತ್ತೊಮ್ಮೆ ಮಂಜುತಿಮ್ಮನ ಕೃತಜ್ಞತಾಪೂರ್ವಕ ನಮನಗಳು. ಸ್ನೇಹ ಸೇತುವಿನ ಬಂಧನ ಹೀಗೆ ನಿರಂತರವಾಗಿ ಗಟ್ಟಿಗೊಳ್ಳುತ್ತಲಿರಲೆಂದು ಆ ಭಗವಂತನಲ್ಲಿ ಮೊರೆಯಿಡುತ್ತೇನೆ.
Special thanks to the wonderful couple Smt & Sri Jayarama Somayaji.
ಮಂಗಳ ಲಕ್ಷ್ಮಿ:
ನನಗೆ ನಿನ್ನೆ ಮಿಸ್ ಆಯ್ತು,,ನನಗೇ ಲಾಸ್ ಅದು
ಸಜ್ಜನರ ಸಹವಾಸ ಎಷ್ಟುಹೊತ್ತು ಸಿಗುತ್ತದೋ ಅಷ್ಟೇ ಪುಣ್ಯ
ನಳಿನಿ ಸೋಮಯಾಜಿ:
ನಾನಂತೂ ನೀವು ಬರುವಿರೆಂದೇ ಎಣಿಸಿದ್ದೆ. ಹೋಗುವ ಮುಂಚೆ ಮಾತಾಡಲೂ ಆಗಲಿಲ್ಲ ಮಂಗಳಾ ಕ್ಷಮಿಸಿ.
ನೀವಂದಂತೆ ಸಜ್ಜನರ ಸಂಗ ಸವಿಜೇನು ಸವಿದಂತೆ.. ಮಂಜಣ್ಣನವರ ಅಕ್ಕ ಮಹಾದೇವಿಯ ವಚನಗಳು, ಶಶಿಧರನ್ ಸರ್ ಅವರ ಪುಸ್ತಕದ ಲೇಖನಗಳ ಬಗ್ಗೆ ಓರ್ವ ಪುಸ್ತಕ ಪ್ರೇಮಿ ಬರೆದ ಸುಂದರ ವಿಮರ್ಶೆ ಹಾಗೆಯೇ ಕೃಷ್ಣ ಮೂರ್ತಿ ಸರ್ ಅವರ ಪುಸ್ತಕದ ಬಗ್ಗೆ ಮೆಚ್ಚುಗೆಯ ಪ್ರೋತ್ಸಾಹದಾಯಕದ ವಿಮರ್ಶೆ ಮದ್ಯೆ ಮಂಜಣ್ಣ ನವರ ಡಿ.ವಿ.ಜಿ.ಕಗ್ಗಗಳು ಹಾಗೂ ಮುದ್ದು ರಾಮರ ಚುಟುಕುಗಳು, ಜಯರಾಮ ಸೋಮಯಾಜಿಯವರ ನೀ ಮಾಯೆ ಯೊಳಗೋ ಕನಕದಾಸರ ಪದ ಹಾಗೂ ವಾಟ್ಸಾಪ್ನ ಲಿ ಬಂದ ಒಳ್ಳೆಯ ನುಡಿ...ಬಬ್ಲಿಯ ನೆನಪು.. ಕೃಷ್ಣಮೂರ್ತಿ ಸರ್ ಅವರ ಹಾಸ್ಯ ಚಟಾಕಿ ಹೀಗೆ ಸಮಯ ಕಳೆದದ್ದೆ ತಿಳಿಯಲಿಲ್ಲ.
ಇದಿಷ್ಟು ಮಾತುಕತೆಗಳ ಸಂಭ್ರಮವಾದರೆ, ಕೃಷ್ಣಮೂರ್ತಿ ಸರ್ ತಾವೇ ತಯಾರಿಸಿದ ರುಚಿ ರುಚಿಯಾದ ರವೆ ಇಡ್ಲಿ ಹಾಗೂ ಚಟ್ನಿ ಮತ್ತು ಕಾಫಿ (ಮನೆಯಲ್ಲಿ ಹಾಕಿದ ಕಾಫಿ ಡಿಕಾಕ್ಷನ್ ಹಾಗೂ ಮಂಜಣ್ಣ ತಂದ ಐಡಿ ಯಾವುದೇ ರೆಡಿ ಡಿಕಾಕ್ಷನ್) ಸ್ವಾದಿಷ್ಟವಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಬಬ್ಲಿ ನಿನ್ನ ನೆನಪು ನಮ್ಮ ಮನದಲ್ಲಿ ಸದಾ.
ಎಲ್ಲರಿಗೂ ನಮಸ್ಕಾರಗಳು.
ಶಶಿಧರನ್ ಸಿ.ಜಿ. ಅವರ ಬರಹ :
೫೯ ಮತ್ತು ೬೦ನೇ ಸ್ನೇಹ-ಸೇತು ಕಾರ್ಯಕ್ರಮ:
ಸ್ನೇಹ-ಸೇತು ಬಳಗದ 59 ನೇ ಕಾರ್ಯಕ್ರಮ ಜೂನ್ 29 ರಂದು ಶ್ರೀ ಕೃಷ್ಣಮೂರ್ತಿ ಚಿಕ್ಕನಹಳ್ಳಿ ಅವರ ಮನೆಯಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ನನ್ನೊಂದಿಗೆ ಶ್ರೀ ಶ್ರೀಪಾದರಾವ್ ಮಂಜುನಾಥ್, ಶ್ರೀ ಕೃಷ್ಣಮೂರ್ತಿ ಚಿಕ್ಕನಹಳ್ಳಿ, ಶ್ರೀ ಲೋಕೇಶ್ ಶ್ರೀಕಂಠಯ್ಯ, ಶ್ರೀ ಜಯರಾಮ್ ಸೋಮಯಾಜಿ ಮತ್ತು ಶ್ರೀಮತಿ ನಳಿನಿ ಸೋಮಯಾಜಿ ಅವರುಗಳು ಪಾಲ್ಗೊಂಡಿದ್ದರು.
ಸಾಮಾನ್ಯವಾಗಿ ಯಾವುದೇ ಪುಸ್ತಕದಲ್ಲಿನ ಮುನ್ನುಡಿ ಬರಹ ಬಹಳ ಮುಖ್ಯವಾಗಿರುತ್ತದೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ, ಪುಸ್ತಕದ ಮುಖ್ಯ ಸಾರವನ್ನೇ ಹೇಳುವ ನುಡಿಯೇ ಆಗಿರುತ್ತದೆ. ಅದಕ್ಕೆ ಮುನ್ನುಡಿ ಎಂದರೆ ಓದುವ
ಮುನ್ನ ನುಡಿ ಎಂದು ಒಬ್ಬ ಬರಹಗಾರರು ಹೇಳಿದ್ದಾರೆ. ಮುನ್ನುಡಿ ಬರೆಯುವುದೂ ಒಂದು ಕಲೆಯ ಕೌಶಲ್ಯ. ಶ್ರೀ ಕೃಷ್ಣಮೂರ್ತಿ ಚಿಕ್ಕನಹಳ್ಳಿ ಅವರ ಮೊದಲ ಕೃತಿ "ಲಾಂದ್ರ" ಎಂಬುವುದಕ್ಕೆ ಹಿರಿಯ ಬರಹಗಾರರಾದ ಶ್ರೀ ಬಾಬು ಕೃಷ್ಣಮೂರ್ತಿ ಅವರು ಮುನ್ನುಡಿ ಬರೆದಿದ್ದಾರೆ. ಹಾಗಾಗಿ, ಇಂದಿನ ಕಾರ್ಯಕ್ರಮದಲ್ಲಿ ಮೊದಲಿಗೆ, ಶ್ರೀ ಬಾಬು ಕೃಷ್ಣಮೂರ್ತಿ ಅವರು ಬರೆದಿದ್ದ ಮುನ್ನುಡಿಯನ್ನು ಶ್ರೀ ಕೃಷ್ಣಮೂರ್ತಿ ಚಿಕ್ಕನಹಳ್ಳಿ ಅವರು ಓದಿದರು.
ಹಾಗೆಯೇ, ಪ್ರಕಟಣೆಗೊಂಡ ಪುಸ್ತಕಕ್ಕೆ ಒಳ್ಳೆಯ ವಿಚಾರಯುಕ್ತ ವಿಮರ್ಷೆ ದೊರಕುವುದೂ ಒಂದು ವಿಶೇಷವೇ ಆಗಿರುತ್ತದೆ. ನನ್ನದೊಂದು "ಚಿಂತನೆಗಳ ಚಿತ್ತಾರ" ಎಂಬ ಪುಸ್ತಕ, ಕಳೆದ ತಿಂಗಳು ಪ್ರಕಟಣೆಗೊಂಡಿದ್ದು, ಅದಕ್ಕೆ ನನ್ನ ಸ್ನೇಹಿತರಾದ ಶ್ರೀ ಕೆ.ಆರ್.ಗುರುರಾಜ್ ಎಂಬುವರು ಸುಂದರವಾದ ವಿಮರ್ಷೆ ಬರೆದಿದ್ದರು. ಈ ವಿಮರ್ಷೆಯಲ್ಲಿ ವಿಶೇಷವೆಂದರೆ, ಪುಸ್ತಕದಲ್ಲಿನ ಲೇಖನಗಳ ಬಗ್ಗೆ ಬರೆದಿರುವರಲ್ಲದೇ, ಮುನ್ನುಡಿ, ನಲ್ನುಡಿ, ಬೆನ್ನುಡಿ ಬರಹಗಳಿಗೂ ವಿಶೇಷವಾಗಿ ತಮ್ಮ ಅನಿಸಿಕೆಯನ್ನು ಬರೆದಿರುವರು. ಇಷ್ಟೇ ಅಲ್ಲದೇ, ಪುಸ್ತಕದ ಮುಖಪುಟದಲ್ಲಿರುವ ವಿನ್ಯಾಸದ ಬಗ್ಗೆ, ಇಡೀ ಪುಸ್ತಕದಲ್ಲಿರುವುದಕ್ಕೂ ವಿನ್ಯಾಸಕ್ಕೂ ವಿಶೇಷವಾದ ಅರ್ಥವನ್ನೂ ಬರೆದಿದ್ದು ವಿಶೇಷವೆನಿಸಿತ್ತು. ಹಾಗಾಗಿ, ಅವರ ವಿಮರ್ಷೆಯನ್ನು ನಾನು ಓದಿದೆ.
ಹಾಗೆಯೇ, ಶ್ರೀ ಜಯರಾಮ್ ಸೋಮಯಾಜಿ ಅವರು ಕನಕದಾಸರ ದೇವರನಾಮ 'ನಿನ್ನೊಳು ಮಾಯೆಯೋ, ಮಾಯೆಯು ನಿನ್ನೊಳೋ' ಎಂಬ ಹಾಡನ್ನು ಸುಶ್ರಾವ್ಯವಾಗಿ ಹಾಡಿದ್ದಲ್ಲದೇ, ಅದರ ಅಂತರಾರ್ಥವನ್ನೂ ತಿಳಿಸಿದರು. ಹಾಗೆಯೇ, ಕೆಲವು ಇಂಗ್ಲೀಷ್ ನುಡಿಗಟ್ಟಿನ ಸಾಲುಗಳಲ್ಲಿರುವ ವಿಶೇಷ ವಿಚಾರಗಳನ್ನು ತಿಳಿಸಿದರು. ಶ್ರೀಮತಿ ನಳಿನಿ ಸೋಮಯಾಜಿ ಅವರು ಶ್ರೀ ಕೃಷ್ಣಮೂರ್ತಿ ಚಿಕ್ಕನಹಳ್ಳಿ ಅವರ ಪುಸ್ತಕವೊಂದರಲ್ಲಿನ ಕೆಲವು ಕವನಗಳನ್ನು ವಾಚಿಸಿದರು. ಹಾಗೆಯೇ, ಶ್ರೀ ಕೃಷ್ಣಮೂರ್ತಿ ಚಿಕ್ಕನಹಳ್ಳಿ ಅವರು ಬಳಗದ ಸದಸ್ಯೆಯರಾದ ಶ್ರೀಮತಿ ಕಪಿಲಾ ಶ್ರೀಧರ್ ಅವರ ಕವನವೊಂದನ್ನು ವಾಚಿಸಿ ವಿಶ್ಲೇಷಿಸಿದರು.
ಈ ಎಲ್ಲರ ಮಧ್ಯೆ ಸಂದರ್ಭೋಚಿತವಾಗಿ ಆಗಾಗ್ಗೆ ಸೂಕ್ತ ಮಂಕುತಿಮ್ಮನ ಕಗ್ಗ ಮತ್ತು ಮರುಳ ಮುನಿಯನ ಕಗ್ಗದ ಮುಕ್ತಕಗಳನ್ನು ಶ್ರೀ ಶ್ರೀಪಾದರಾವ್ ಮಂಜುನಾಥ್ ಅವರು ವಾಚಿಸಿ, ಅರ್ಥವನ್ನೂ ಹೇಳುತ್ತಿದ್ದುದು ವಿಶೇಷವೆನಿಸಿತ್ತು.
ಮರ ತನ್ನ ಹೆತ್ತ ಬೀಜವನಿಲ್ಲವೆನಿಸಿ ವಿ-
ಸ್ತರಿಸುವಂದದಿ, ಸೃಷ್ಟಿ ತನ್ನ ಮೂಲವನು
ಮರೆಮಾಚಿ ತಾನೆ ಮೆರೆಯುತ್ತಿಹುದು ಕಣ್ಗಳಿಗೆ
ನೊರೆ ಸೃಷ್ಟಿ ಪಾಲ್ ಬ್ರಹ್ಮ - ಮಂಕುತಿಮ್ಮ (೭೫)
ವಿಸ್ತಾರದಲಿ ಬಾಳು, ವೈಶಾಲ್ಯದಿಂ ಬಾಳು
ಕತ್ತಲೆಯ ಮೊಡುಕು ಮೂಲೆಗಳ ಸೇರದಿರು
ಭಾಸ್ಕರನನುಗ್ರಹವೆ ನೂತ್ನ ಜೀವನಸತ್ತ್ವ
ಮೃತ್ಯು ನಿನಗಲ್ಪತೆಯೊ - ಮಂಕುತಿಮ್ಮ (೯೧೩)
ಮಲವಿರದ ಮೈಯಿರದು ಕೊಳೆಯಿರದ ಮನವಿರದು
ಗಳಿಗೆ ಗಳಿಗೆಯ ಬೆವರೆ ಬಾಳಿಕೆಯ ಕುರುಹು
ಕೊಳೆವುದಚ್ಚರಿಯಲ್ಲ, ಕೊಳೆಯದಿಹುದಚ್ಚರಿಯೊ
ಜಳಕವಾಗಿಸು ಬಾಳ್ಗೆ = ಮರುಳ ಮುನಿಯ (೨೯೦).
ಶ್ರೀಮತಿ ನಳಿನಿ ಸೋಮಯಾಜಿ ಅವರು ಮನೆಯಿಂದ ತಾವೇ ತಯಾರಿಸಿದ ಸಿಹಿ,ಖಾರದ ತಿನಿಸುಗಳ ವಿತರಣೆಯೊಂದಿಗೆ ೫೯ನೇ ಕಾರ್ಯಕ್ರಮ ಸಂಪನ್ನವಾಯಿತು.
೬೦ನೇ ಸ್ನೇಹ-ಸೇತು ಕಾರ್ಯಕ್ರಮ
೬೦ನೇ ಸ್ನೇಹ-ಸೇತು ಕಾರ್ಯಕ್ರಮ ಈ ಬಾರಿ ಶ್ರೀ ಶ್ರೀಪಾದರಾವ್ ಮಂಜುನಾಥ್ ಅವರ ಮನೆಯಲ್ಲಿ ಕಳೆದ ಗುರುವಾರ ಜರುಗಿತು. ಈ ಕಾರ್ಯಕ್ರಮದಲ್ಲಿ ನನ್ನೊಂದಿಗೆ ಶ್ರೀ ಶ್ರೀಪಾದರಾವ್ ಮಂಜುನಾಥ್, ಶ್ರೀ ಕೃಷ್ಣಮೂರ್ತಿ ಚಿಕ್ಕನಹಳ್ಳಿ ಮತ್ತು ಶ್ರೀ ಯತಿರಾಜ್ ವೀರಾಂಬುಧಿ ಅವರು ಪಾಲ್ಗೊಂಡಿದ್ದರು.
ಈ ಬಾರಿ ಒಂದೆರಡು ಸಾಹಿತ್ಯದ ಶಬ್ದಗಳ ವ್ಯಾಕರಣ ವಿಶೇಷದ ಚಿಂತನೆ ನಡೆಯಿತು. ಕೂಲಂಕಷ ಮತ್ತು ಐಷಾರಾಮ -ಈ ಎರಡು ಪದಗಳ ವ್ಯುತ್ಪತ್ತಿ ಮತ್ತು ಅದರ ಅರ್ಥ ತಿಳಿಯುವ ಪ್ರಯತ್ನ ನಡೆಯಿತು. ಸಾಮಾನ್ಯವಾಗಿ ರೂಢಿಯಲ್ಲಿ ಕೆಲವರು ಕೂಲಂಕುಷ ಎಂದು ಹೇಳುವುದನ್ನು ಕೇಳಿದ್ದೇವೆ. ಆದರೆ, ಇದು ಕೂಲಂಕಷ ಎಂಬುದೇ ಆಗಿರುತ್ತದೆ. ಈ ಪದವು ಸಂಸ್ಕೃತ ಭಾಷೆಯ ಶಬ್ದಗಳಿಂದ ಕೂಡಿರುತ್ತದೆ. ಕೂಲ ಮತ್ತು ಕಷ ಎಂಬ ಎರಡು ಶಬ್ದಗಳು ಸಂಧಿ, ಸಮಾಸದೊಂದಿಗೆ ಕೂಲಂಕಷ ಎಂಬುದಾಗಿರುತ್ತದೆ. ಕೂಲ ಎಂದರೆ ಕೆರೆ, ನದಿ ಮೊದಲಾದವುಗಳ ತೀರ, ದಡ ಎಂಬ ಅರ್ಥವಿದ್ದು, ಕಷ ಎಂದರೆ ಉಜ್ಜುವ, ಕರಗಿಸುವ ಎಂಬ ಅರ್ಥವಿದೆ. ಹಾಗೆಯೇ ಕೂಲಂಕಷ ಎಂಬುದಕ್ಕೆ ತೀರವನ್ನು ವ್ಯಾಪಿಸುವ, ದಡವನ್ನು ಮುಟ್ಟುವ, ದಡವನ್ನು ಕೊರೆಯುವ, ಎಂಬಿತ್ಯಾದಿಯಾಗಿ ಅರ್ಥವಿದೆ. ಸೂಕ್ಷ್ಮಾರ್ಥದಲ್ಲಿ, ಆಳವಾಗಿ ಎಂಬ ಅರ್ಥವಿದೆ. ಹಾಗಾಗಿ, ಯಾವುದಾದರೂ ಆಮೂಲಾಗ್ರವಾಗಿ ಅಭ್ಯಸಿಸುವುದಕ್ಕೆ ಕೂಲಂಕಷ ಎಂಬ ಪದವನ್ನು ಬಳಸುತ್ತೇವೆ.
ಹಾಗೆಯೇ, ಐಷಾರಾಮ ಎಂಬ ಪದಕ್ಕೆ ಸುಖ ಜೀವನ ಎಂಬ ಅರ್ಥವಿದೆ. ನಿಘಂಟಿನಲ್ಲಿ ಈ ಪದವು ಅರಾಬಿಕ್ ಭಾಷೆಯಿಂದ ಬಂದಿದೆ ಎಂದು ಹೇಳಿದರೂ, ಸಂಸ್ಕೃತ ಶಬ್ದದಿಂದ ವ್ಯುತ್ಪತ್ತಿ ಹೊಂದಿರುವುದಕ್ಕೆ ಸಾಧ್ಯತೆ ಇದೆ ಎಂದು ಒಂದು ಅನಿಸಿಕೆ ಇದೆ. ಸಂಸ್ಕೃತ ಕನ್ನಡ ಶಬ್ದಾರ್ಥ ಕೋಷದ ಪ್ರಕಾರ ಏಷ ಎಂಬುದಕ್ಕೆ - ಇಷ(ಗತೌ) ಇಷು (ಇಚ್ಛಾಯಾಮ್) ವಾ ಘಞ್(೩.೩.೧೭) ಎಂಬ ವಿವರಣೆಯೊಂದಿಗೆ ಸರಿಯುವಿಕೆ, ಚಲಿಸುವಿಕೆ, ಗಮನ, ಹೋಗುವಿಕೆ ಎಂಬ ಅರ್ಥಗಳ ಜೊತೆ ಅಪೇಕ್ಷೆ, ಇಚ್ಛೆ ಎಂಬ ಅರ್ಥವಿದೆ. ಏಷ ಎಂಬ ಶಬ್ದಕ್ಕೆ ಅಣ್ ಪ್ರತ್ಯಯ ಸೇರಿ ಐಷ ಎಂದಾಗಿ. ಮುಂದೆ, ಈ ಶಬ್ದಕ್ಕೆ, ಆರಾಮ ಎಂಬ ಶಬ್ದವು ಸಂಧಿ ಹೊಂದಿ, ಐಷಾರಾಮ ಎಂದಾಗಬಹುದಲ್ಲವೇ ಎಂಬ ಒಂದು ಅನಿಸಿಕೆಯಾಗಿ, ಇಂದಿನ ಚರ್ಚೆಗೆ ಗ್ರಾಸವಾಗಿತ್ತು.
ಸಾಮಾನ್ಯವಾಗಿ ಶೀ ಕೆ.ಎಸ್.ನರಸಿಂಹಸ್ವಾಮಿ ಅವರ ಕವನಗಳು ಎಂದರೆ, ಪ್ರೇಮಗೀತೆಗಳೇ ಆಗಿ, ಕಂಡು ಬರುವುದಾದರೂ, ಅಧ್ಯಾತ್ಮಿಕ ವಿಚಾರದಿಂದ ಕೂಡಿದ ಅನೇಕ ಪದ್ಯಗಳನ್ನೂ ರಚಿಸಿರುವರು. ಇದಕ್ಕೆ ಉದಾಹರಣೆಯಾಗಿ, ಶ್ರೀ ಶ್ರೀಪಾದರಾವ್ ಮಂಜುನಾಥ್ ಅವರು ಶ್ರೀ ಕೆ.ಎಸ್.ನರಸಿಂಹಸ್ವಾಮಿ ಅವರ ಕವನವೊಂದಾದ 'ಉತ್ತರ ಸಿಕ್ಕಬಹುದು' ಎಂಬುದನ್ನೂ, ಶ್ರೀ ಯತಿರಾಜ್ ವೀರಾಂಬುಧಿ ಅವರು "ಕೆಲವು ಅನುಭವ ಹೀಗೆ" ಎಂಬ ಕವನವನ್ನೂ ವಾಚಿಸಿ ವಿಶ್ಲೇಷಿಸಿದರು. ಹಾಗೆಯೇ ತಮ್ಮ ಜೀವನದ ಕೆಲವು ಅನುಭವಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮಕ್ಕೆ ಬಳಗದ ಸದಸ್ಯೆಯಾದ ಶ್ರೀಮತಿ ಕಪಿಲಾ ಶ್ರೀಧರ್ ಅವರು ಅನುಪಸ್ಥಿತಿಯಲ್ಲಿದ್ದರೂ, ಉಪಸ್ಥಿತಿಯಲ್ಲಿದ್ದಂತೆಯೇ ತೋರುವಂತೆ, ಶ್ರೀ ಕೃಷ್ಣಮೂರ್ತಿ ಚಿಕ್ಕನಹಳ್ಳಿ ಅವರು ಶೀಮತಿ ಕಪಿಲಾ ಶ್ರೀಧರ್ ಅವರ ಕವನವನ್ನು ವಾಚಿಸುವ ಮತ್ತು ಒಂದು ಇಂಗ್ಲೀಷ್ ಸಿನಿಮಾದ ಬಗ್ಗೆ ವಿಶ್ಲೇಶಣೆಯುಕ್ತ ಲೇಖನವನ್ನು ಓದುವ ಮೂಲಕ ಮಾಡಿದರು.
ಎಂದಿನಂತೆ ಶ್ರೀ ಶ್ರೀಪಾದರಾವ್ ಮಂಜುನಾಥ್ ಅವರಿಂದ ಸಂದರ್ಭಕ್ಕೆ ತಕ್ಕಂತೆ ಅನೇಕ ಮಂಕುತಿಮ್ಮನ ಕಗ್ಗ ಮತ್ತು ಮರುಳ ಮುನಿಯನ ಕಗ್ಗದ ಮುಕ್ತಕಗಳು ಕೇಳಿ ಬಂದವು.
ಲಘು ಉಪಹಾರದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಈ ಎರಡೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನನಗೆ ಅವಕಾಶ ಕೊಟ್ಟಿದ್ದಿಕ್ಕಾಗಿ ಬಳಗಕ್ಕೆ ಧನ್ಯವಾದಗಳು.
ಬರೆದಿರುವುದು 30 / 6 /2023
ನೀವು ( ಶ್ರೀಮತಿ ನಳಿನಿ ಸೋಮಯಾಜಿ, ಶ್ರೀಯುತ ಜಯರಾಮ ಸೋಮಯಾಜಿ, ಶ್ರೀಯುತ ಕೃಷ್ಣಮೂರ್ತಿ ಚಿಕ್ಕನಹಳ್ಳಿ, ಶ್ರೀಯುತ ಸಿ.ಜಿ. ಶಶಿಧರನ್ ) ನೆನ್ನೆ ಒದಗಿಸಿದ ಅದ್ಭುತ ಕ್ಷಣಗಳು ಬಬ್ಲಿಯ ಅಗಲಿಕೆಯ ನೋವಿನಲ್ಲಿದ್ದ ನನ್ನ ಮನಸ್ಸನ್ನು ಹಗುರಗೊಳಿಸಿತು. ಇದಕ್ಕಾಗಿ ನೀವಿತ್ತ ಸಮಯಕ್ಕೆ ನಾನು ಆಭಾರಿಯಾಗಿದ್ದೇನೆ. ವಂದನೆಗಳು. Thanks again.
ReplyDeleteಧನ್ಯವಾದಗಳು ...... ಅರ್ಥಪೂರ್ಣವಾದ ಸಮಯ ಕಳೆದಂತಾಯ್ತು....
ReplyDelete