Friday, December 15, 2023

ADHYATMA - SHOBHA ARTICLE

 14th December 2023


ಇವತ್ತು ನಾನು ಆನ್ಲೈನ್ ನ ಆಧ್ಯಾತ್ಮಿಕ ಸೆಶನ್ ಒಂದನ್ನು ಅಟೆಂಡ್ ಆಗಿದ್ದೆ. ಅವರ ಮಾತುಗಳನ್ನು ಕೇಳುತ್ತಾ ಕೇಳುತ್ತಾ ಅವರು ಸರಳೀಕರಿಸಿ ಹೇಳಿದ ಬದುಕಿನ ಸತ್ಯವೊಂದರ ದರ್ಶನವಾಯಿತು. ಅದೇನೆಂದರೆ ನಮ್ಮೊಳಗಿರುವ ಅಗಾಧವಾದ “ಪ್ರತಿಕ್ರಿಯಿಸುವ” ತಾಕತ್ತಿನ ಬಗ್ಗೆ; ಪ್ರತಿಕ್ರಿಯಿಸುವ ಭಾವಕ್ಕೂ, ಪ್ರತಿಕ್ರಿಯಿಸುವ ಕ್ರಿಯೆಗೂ ಇರುವ ಸೂಕ್ಷ್ಮ ವ್ಯತ್ಯಾಸದ ಬಗ್ಗೆ. ನಮ್ಮೊಳಗೆ ಉದಿಸುವ ಭಾವಕ್ಕೂ, ಅದು ಕ್ರಿಯೆಯಾಗಿ ವ್ಯಕ್ತವಾಗುವುದರಿಂದ ಆಗುವ ಪರಿಣಾಮಕ್ಕೂ ಇರುವ ವ್ಯತ್ಯಾಸ ಅರ್ಥವಾಯಿತು.

ಅವರು ಒಂದು ಸಣ್ಣ ಚಟುವಟಿಕೆಯ ಮೂಲಕ ಅದನ್ನು ನಮ್ಮ ಅನುಭವಕ್ಕೆ ತಂದರು. ಕಣ್ಣು ಮುಚ್ಚಿಕೊಂಡು ಅವರ ಮಾತನ್ನು ಕೇಳುತ್ತಾ ಕೇಳುತ್ತಾ “ಕೇಳುವ ಮನೋಭೂಮಿಕೆ”ಯನ್ನು ಸೃಷ್ಟಿಸಿದರು. ನಮ್ಮೊಳಗಿರುವ ಅಗಾಧವಾದ ‘ಪ್ರತಿಕ್ರಿಯಿಸುವ’ ತಾಕತ್ತಿನ ಬಗ್ಗೆ ಹೇಳತೊಡಗಿದರು. ಯಾವುದೋ ಒಂದು ಸನ್ನಿವೇಶದಲ್ಲಿ ನಮ್ಮ ಅತ್ಯಂತ ಪ್ರೀತಿಯ ವ್ಯಕ್ತಿಯೊಂದಿಗೆ ನಮ್ಮೊಳಗೆ ಎಂತಹ ಪ್ರತಿಕ್ರಿಯಿಸುವ ಭಾವ ಹುಟ್ಟುತ್ತದೆ ಎಂದು ಕಲ್ಪಿಸಿ ಅನುಭವಿಸಲು ಹೇಳಿದರು. ತದನಂತರದಲ್ಲಿ ನಮಗೆ ಸ್ವಲ್ಪ ಪರಿಚಿತರಿರುವ ವ್ಯಕ್ತಿಯೊಡನೆ ಎಂತಹ ಭಾವ ಹೊಮ್ಮುತ್ತದೆ ಎಂದು ಕೇಳಿದರು. ಅದೇ ರೀತಿ ಸಂಪೂರ್ಣ ಅಪರಿಚಿತ ವ್ಯಕ್ತಿ, ನಮಗೆ ಹಿತಕರ ಎನಿಸದ ವ್ಯಕ್ತಿ, ನಾವು ಸಂಪೂರ್ಣವಾಗಿ ದೂರವಿಡುವ ವ್ಯಕ್ತಿಗಳೊಂದಿಗೆ ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ನಮ್ಮೊಳಗೆ ಉದಿಸುವ ಪ್ರತಿಕ್ರಿಯಿಸುವ ಭಾವವನ್ನು ಅನುಭವಿಸಿ ಅರಿಯಲು ಹೇಳಿದರು. ಎಲ್ಲಾ ಸಂದರ್ಭಗಳಲ್ಲೂ ಅದು ಕೇವಲ ಭಾವವಾಗಿ ಮಾತ್ರ ಉಳಿಯಲಿ; ಅದು ಒಂದು ಕ್ರಿಯೆಯಾಗಿ ವ್ಯಕ್ತವಾಗುವ ಅಗತ್ಯವಿಲ್ಲ ಎಂದೂ ಹೇಳಿದರು. ಸುಮಾರು ಹತ್ತು ನಿಮಿಷಗಳ ಈ ಚಟುವಟಿಕೆಯಲ್ಲಿ ನಾನು ಅರಿತುಕೊಂಡಿದ್ದೇನೆಂದರೆ ವ್ಯಕ್ತಿ ಅತೀ ಪ್ರೀತಿಪಾತ್ರರೇ ಆಗಿರಲಿ ಇಲ್ಲವೇ ನಮಗೆ ಅಹಿತಕರರೇ ಆಗಿರಲಿ ಆ ನಿರ್ದಿಷ್ಟ ಸನ್ನಿವೇಶದಲ್ಲಿ ನಮ್ಮೊಳಗೆ ಉದಿಸುವ ಭಾವ ಎಲ್ಲರ ಬಗ್ಗೆಯೂ ಒಂದೇ ರೀತಿಯದ್ದಾಗಿರುತ್ತದೆ!

ಈ ಅರಿವು ನನ್ನೊಳಗೆ ಎಂತಹ ಸಂಚಲನ ಮೂಡಿಸಿತೆಂದರೆ ನಾವು ಬದುಕುವ ಅಲ್ಪಾವಧಿಯಲ್ಲಿ ಬೇಕು-ಬೇಡದ ಭಾವ ಹಾಗೂ ಕ್ರಿಯೆಗಳ ಘರ್ಷಣೆಯಲ್ಲಿ ನಾವು ಮುಳುಗಿ ಬಿಟ್ಟು ನಮ್ಮ ಬದುಕನ್ನು ಅನ್ಯಾಯವಾಗಿ ಹಾಳು ಮಾಡಿಕೊಳ್ಳುತ್ತೇವಲ್ಲವೇ ಎಂದು. ಈ ಅಗಾಧವಾದ ಪ್ರಪಂಚದಲ್ಲಿ ನಾವೊಂದು ಯಾರೂ ಗಮನಿಸದ ಕಣವಷ್ಟೇ! ಅದರಿಂದ ಹುಟ್ಟುವುದು ನಾವು ಮನುಷ್ಯರು ಎನ್ನುವ ಭಾವ ಹಾಗೂ ನಮ್ಮದೇ ಆದ ಹೆಸರಿನೊಂದಿಗೆ ನಮಗೆ ದೊರೆಯುವ ಐಡೆಂಟಿಟಿ(ಅಹಂ). ಆ ಐಡೆಂಟಿಟಿಯನ್ನು ದಕ್ಕಿಸಿಕೊಂಡು ಉಳಿಯಲು ಬದುಕಿಡೀ ನಾವು ಬೇಕು-ಬೇಡದ ಭಾವನೆಗಳೊಂದಿಗೆ ಸೆಣಸಾಡುತ್ತೇವೆ. ‘ನಾನು’ ಎನ್ನುವ ಅಹಮಿಕೆಯ ಗುಳ್ಳೆಯಿಂದ ಹೊರಬಂದರೆ ಬದುಕು ಸರಳ ಸುಂದರ! ಆ ಅಹಮಿಕೆಯನ್ನು ನಾವು ಹೇಗೆ ನಿಭಾಯಿಸುತ್ತೇವೆ ಎಂಬುವುದರ ಮೇಲೆ ನಮ್ಮ ಬದುಕಿನಲ್ಲಿ ಅದು ನಾಯಕನ ಪಾತ್ರ ಅಥವಾ ಖಳನಾಯಕನ ಪಾತ್ರ ವಹಿಸುತ್ತದೆ ಎಂಬ ಸತ್ಯ ಗೋಚರಿಸಿತು.

ಈ ಬಗ್ಗೆ ಮೊದಲೇ ಬಹಳಷ್ಟು ಗೊತ್ತಿದ್ದರೂ ಇವತ್ತು ಆ ಸರಳ ಚಟುವಟಿಕೆಯ ಮೂಲಕ ಅದು ಅನುಭವಕ್ಕೆ ಬಂದದ್ದು ಮನಸ್ಸಿಗೆ ಬಹಳ ಮುದ ನೀಡಿತು. ನನಗಾದ ಅನುಭವವನ್ನು ಹಾಗೂ ಅದರ ಬಗ್ಗೆ ನನ್ನ ಅರ್ಥೈಸಿಕೊಳ್ಳುವಿಕೆಯನ್ನು ನನ್ನಿಂದಾದ ಮಟ್ಟಿಗೆ ಹಂಚಿಕೊಳ್ಳುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ

15/12/2023

No comments:

Post a Comment