December 11, 2023
SHOBHA ARTICLE - MOVIE REVIEW
ಇವತ್ತು ನಾನು ಅಮೆಜಾನ್ ಪ್ರೈಮ್ ನಲ್ಲಿ‘ಮಸ್ತ್ ಮೇ ರೆಹ್ನೆ ಕಾ’ ಎಂಬ ಎರಡು ಗಂಟೆಯ ಅವಧಿಯ ಸಿನೆಮಾ ನೋಡಿದೆ. ಅದು ಕೇವಲ ಒಂದು ಸಿನೆಮಾ ಎಂದು ನನಗೆ ಅನಿಸಲಿಲ್ಲ. ನಾನು ನೋಡಿದ, ನೋಡುತ್ತಿರುವ, ಕೇಳಿದ ಬದುಕೇ ತೆರೆಯ ಮೇಲೆ ಮೂಡಿ ಬಂದಿರುವ ಹಾಗೆ ಕಂಡಿತು.
ನಾನು ಪುಟ್ಟ ಹಳ್ಳಿಯಲ್ಲಿ ನನ್ನದೇ ಆದ ಜನ ಹಾಗೂ ನನ್ನ ಕುಟುಂಬದ ಜೊತೆಗೆ ಇರುವವಳು. ‘ನಾನು ಒಂಟಿ’ ಎಂದು ಅನುಭವ ಬಾರದ ವಾತಾವರಣದಲ್ಲಿದ್ದೇನೆ. ಜನರೊಡನಾಟ ನನ್ನ ಜೀವನಾಡಿ ಎಂದರೂ ತಪ್ಪಿಲ್ಲ. ಆದರೆ ನನ್ನಂತಹ ಎಷ್ಟು ಜನ ನಡುವಯಸ್ಸಿನವರಿಗೆ ಇಂತಹ ಬದುಕು ಸಿಗಲು ಸಾಧ್ಯ? ಅದೂ ದೊಡ್ಡ ಪಟ್ಟಣದಲ್ಲಿ (ಈಗೀಗ ಹಳ್ಳಿಯಲ್ಲೂ) ಇರುವ ವಯಸ್ಸಾದ/ನಡು ವಯಸ್ಸಿನ ಎಷ್ಟೋ ಒಂಟಿ ಜೀವಗಳ ಒಳಗಿನ ತವಕ ತಲ್ಲಣಗಳನ್ನು ಅರಿಯುವವರಾರು? ಅವರ ಒಂಟಿತನದ ನೋವನ್ನು ಕಾಣುವವರಾರು? ಅವರ ಏಕತಾನತೆಯ ಬದುಕಿನ ಖಾಲಿತನವನ್ನು ಅರಿಯುವವರಾರು? ಅಂತಹವರ ಬದುಕಿನ ಒಳನೋಟವನ್ನು ಕೊಡುವ ಪ್ರಯತ್ನವನ್ನು ನಿರ್ದೇಶಕ ವಿಜಯ್ ಮೌರ್ಯ ಅವರು ಈ ಸಿನೆಮಾದಲ್ಲಿ ಮಾಡಿದ್ದಾರೆ. ಹಾಗೆಯೇ ಹಳ್ಳಿಯಿಂದ ಬದುಕನ್ನು ಕಟ್ಟಿಕೊಳ್ಳಲು ದೊಡ್ಡ ನಗರಕ್ಕೆ ಬಂದ ಅಮಾಯಕನ ಬದುಕಿನ ಹೋರಾಟವನ್ನೂ ಚಿತ್ರಿಸಿದ್ದಾರೆ.
ಜಾಕಿ ಶ್ರಾಫ್, ನೀನಾ ಗುಪ್ತಾರಂತಹ ಪ್ರಬುದ್ಧ ನಟರೊಡನೆ ಅಭಿಷೇಕ್ ಚೌಹಾಣ್ ಹಾಗೂ ಮೋನಿಕಾ ಪನ್ವಾರ್ ರಂತಹ ಹೊಸ ಪ್ರತಿಭೆಗಳು ಹಿರಿಯರ ಸಮಕ್ಕೆ ಸಮನಾಗಿ ಪಾತ್ರದೊಳಗೆ ಒಂದಾಗಿ ಅಭಿನಯಿಸಿರುವುದು ಈ ಸಿನೆಮಾದ ಪ್ಲಸ್ ಪಾಯಿಂಟ್! ಇಡೀ ಸಿನೆಮಾವನ್ನು ಸಣ್ಣ ಹಾಸ್ಯ, ಅನುಕಂಪ, ದುಃಖದ ಭಾವಗಳ ಮಿಳಿತದೊಂದಿಗೆ ನೇಯಲಾಗಿದೆ. ಎಲ್ಲೂ ಕೂಡಾ ಅನಗತ್ಯವಾಗಿ ಕಥೆಯನ್ನು ಎಳೆಯದೆ, ಯಾವುದೋ ಒಂದು ಭಾವವನ್ನು ವೈಭವೀಕರಿಸದೆ ಸರಳ ನಿರೂಪಣೆಯ ಮೂಲಕ ಸಹಜವಾಗಿ ಚಿತ್ರಿಸಿರುವುದು ಈ ಸಿನೆಮಾ ನಮ್ಮೆಲ್ಲರೊಳಗೆ ಸ್ಪಂದನೆಯನ್ನು ಮೂಡಿಸುವುದರಲ್ಲಿ ಯಶಸ್ವಿಯಾಗಲು ಕಾರಣವಾಗಿದೆ. ಹಾಗೆಯೇ ಪ್ರತಿ ಪಾತ್ರದ ಚಿತ್ರಣವೂ ಒಂದು ನಿರ್ದಿಷ್ಟ ಚೌಕಟ್ಟಿನೊಳಗಿರುವುದು ಕಲಾವಿದರಿಗೆ ಪಾತ್ರಕ್ಕೆ ಜೀವ ತುಂಬಲು ಸಹಾಯಕವಾಗಿದೆ. ಇಡೀ ಸಿನೆಮಾ ನಮ್ಮ ನಮ್ಮ ಬದುಕಿಗೆ ರಿಲೇಟೆಬಲ್ ಎಂದೆಲ್ಲೋ ಅನಿಸುತ್ತದೆ. ಪ್ರಪಂಚದಲ್ಲಿ ಇನ್ನೂ ಅಲ್ಲಲ್ಲಿ ಒಳ್ಳೆಯತನ ಉಳಿದಿರುವುದನ್ನು ಈ ಸಿನೆಮಾ ತೋರಿಸುತ್ತದೆ; ವ್ಯವಹಾರಕ್ಕೂ ಮೀರಿದ ಭಾವ-ಬಂಧವನ್ನು ನಮ್ಮ ಮುಂದೆ ಬಿಚ್ಚಿಡುತ್ತದೆ.
ಎಲ್ಲೂ ಅಭಿನಯಾತಿರೇಕವಿಲ್ಲದೆ ಸಹಜಾಭಿನಯ ನೀಡುವುದರ ಮೂಲಕ ಪ್ರತಿಯೊಬ್ಬ ಕಲಾವಿದರು ಗೆಲ್ಲುತ್ತಾರೆ. ಎಲ್ಲರೂ ನೋಡಲೇಬೇಕಾದ ಉತ್ತಮ ಸಿನೆಮಾವಿದು ಎಂದು ನನ್ನ ಅಭಿಪ್ರಾಯ
Posted 14/12/2023
No comments:
Post a Comment