ಮಂಗಳವಾರ, ಮೇ 21, 2024
ಗುರು ನರಸಿಂಹ ಕಲ್ಯಾಣ ಮಂಟಪ, ಬಸವನ ಗುಡಿ , ಬೆಂಗಳೂರು.
ಪ್ರತಿ ವರ್ಷದಂತೆ ನಡೆಯುವ ಶ್ರೀ ಗುರು ನರಸಿಂಹ ಜಯಂತೋತ್ಸವವು ವಿಜೃಂಭಣೆ ಯಿಂದ ಸಂಪನ್ನಗೊಂಡಿತು.
ನೂರಾರು ಮಂದಿ ಭಕ್ತಾದಿಗಳು ಪೂಜೆ, ಮಂಗಳಾರತಿ, ತೀರ್ಥ ಪ್ರಸಾದ, ಸ್ವೀಕರಿಸಿ ಭಗವಂತನ ಕೃಪೆಗೆ ಕಟಾಕ್ಷರಾದರು.
ದಿನವಿಡೀ ಉತ್ಸವದ ಕಾರ್ಯಕ್ರಮವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಮಧ್ಯಾಹ್ನದ ಮತ್ತು ಸಂಜೆಯ ಸಮಯದಲ್ಲಿ ಆಗಮಿಸುವರು.
ಉತ್ಸವದ ಭಾಗವಾಗಿ ಬಾಳೆ ಎಲೆ ಊಟ ಹಾಗೂ ಬಫೆ ಊಟವನ್ನೂ ಆಯೋಜಿಸಲಾಗಿತ್ತು.
ಬಂಧುಗಳು, ಹಿತೈಷಿಗಳು, ಆತ್ಮೀಯರು ಸೇರಿ ಉಭಯಕುಶಲೋಪರಿ ಸಾಮಾನ್ಯವಾಗಿತ್ತು.
ಜನರು ಜಾಸ್ತಿ ಯಾಗಿದ್ದರಿಂದ, ನಾವು ಬಫೆ ಊಟವನ್ನು ಮಾಡಿ ಮನೆಗೆ ಹಿಂತಿರುಗಿದೆವು.
#ಇಂದು_ಶ್ರೀ_ನರಸಿಂಹ_ಜಯಂತಿ, ತನ್ನಿಮಿತ್ತ ನರಸಿಂಹಾವತಾರದ ಕಥೆ.
ಕೃತಯುಗದ ಪ್ರಾರಂಭ ಕಾಲ. ವೈಕುಂಠದಲ್ಲಿ ಶ್ರೀಮನ್ನಾರಾಯಣನು ಪತ್ನಿ ಶ್ರೀದೇವಿಯೊಂದಿಗೆ ಅಂತರಂಗ ವಿಲಾಸದಲ್ಲಿರುವ ಸುಮಧುರ ಸಮಯ.ಆ ಸಮಯದಲ್ಲಿ ವೈಕುಂಠ ದ್ವಾರ ಮುಚ್ಚಲಾಗಿದೆ. ಹೊರಗಡೆ ಗದೆ ಹಿಡಿದು ಜಯ ಮತ್ತು ವಿಜಯ ಎಂಬ ಇಬ್ಬರು ದ್ವಾರಪಾಲಕರು ಕಾವಲು ಕಾಯುತ್ತಿದ್ದಾರೆ.ಆ ಸಮಯದಲ್ಲಿ ಭಗವಾನ್ ಮಹಾವಿಷ್ಣುವಿನ ದರ್ಶನ ಮಾಡಲು ಬ್ರಹ್ಮನ ಮಾನಸಪುತ್ರರಾದ ನಾರದರು ಬಂದರು.
ಅವರನ್ನು ದ್ವಾರಪಾಲಕರು ತಡೆದು,ಭಗವಂತನ ದರ್ಶನಕ್ಕೆ ಈ ಸಮಯದಲ್ಲಿ ಅವಕಾಶ ಇಲ್ಲ ಎಂದರು.
ಅದಕ್ಕೆ ನಾರದರು "#ಕಾಲಾತೀತನಾದ #ಭಗವಂತನ_ದರ್ಶನಕ್ಕೆ ನನಗೆ ಕಾಲದ ನಿರ್ಬಂಧವಿಲ್ಲ.ಯಾವಾಗ ಬೇಕಾದರೂ ದರ್ಶನ ಮಾಡಬಹುದು.ನನಗೆ ಯಾವಾಗ ಬೇಕಾದರೂ, ಬೇಕೆನಿಸಿದಾಗ ಬ್ರಹ್ಮಲೋಕ,
ಕೈಲಾಸ,ವೈಕುಂಠಕ್ಕೆ ಯಾವ ಅಡೆತಡೆ ಇಲ್ಲದೆ ಮುಕ್ತವಾಗಿ ಪ್ರವೇಶಿಸುವ ಅಧಿಕಾರವಿದೆ" ಎಂದು ಹೇಳಿದರು.
ದ್ವಾರಪಾಲಕರಿಗೆ,
#ಶ್ರೀಹರಿಯ_ಪರಮಾನುಗ್ರಹಕ್ಕೆ #ಪಾತ್ರರಾಗಿದ್ದೇವೆ ಎಂಬ ಅಹಂಕಾರವು ಆವರಿಸಿದ್ದಕ್ಕೆ ಇವರು ಈ ರೀತಿ ಉದ್ಧಟತನದಿಂದ ವರ್ತಿಸುತ್ತಿದ್ದಾರೆ ಎಂದು ತಿಳಿದ ನಾರದರು
‘‘ನೀವು ಜನ್ಮಾಂತರಗಳ ಕಾಲ ರಾಕ್ಷಸರಾಗಿ ಭೂಮಿಯ ಮೇಲೆ ಜನಿಸಿರಿ" ಎಂದು ಶಾಪವಿತ್ತರು.
ನಾರದರಿಂದ ಶಪಿಸಲ್ಪಟ್ಟು, ಭಯಗೊಂಡ ಜಯ-ವಿಜಯರು ಶಾಪವಿಮೋಚನೆಗಾಗಿ ಮಹಾವಿಷ್ಣುವಿನ ಬಳಿ ಹೋಗಿ ಬೇಡಿಕೊಂಡರು.ಆದರೆ ಪರಮಾತ್ಮನು ‘‘ಮೂರು ಜನ್ಮಗಳ ಕಾಲವಾದರೂ ಈ ಶಾಪ ಅನುಭವಿಸಲೇಬೇಕು.ಮಹರ್ಷಿಯ ಶಾಪವನ್ನು ಉಪಸಂಹರಿಸಲು ಆಗದು ಎಂದು ಹೇಳಿದನು.
ನಾರದರ ಶಾಪದಂತೆ ಜಯ ವಿಜಯರ ಮೊದಲ ಜನ್ಮ ಕೃತಯುಗದಲ್ಲಿ ಆಗುತ್ತದೆ. ಹಿರಣ್ಯಕಶ್ಯಪ ಮತ್ತು ಹಿರಣ್ಯಾಕ್ಷ ಎಂಬ ರಾಕ್ಷಸರಾಗಿ ಇಬ್ಬರೂ ಜನಿಸುತ್ತಾರೆ. ದೈವದ್ವೇಷ ಮತ್ತು ಅಧರ್ಮ ಆಚರಣೆಯಲ್ಲಿ ಬಾಳುತ್ತಾರೆ.
ಹಿರಣ್ಯಕಶ್ಯಪನು ಹರಿದ್ವೇಷಿಯಾಗಿ ಧರ್ಮಾತ್ಮರನ್ನು, ದೈವ ಭಕ್ತರನ್ನು, ಹರಿಭಕ್ತರನ್ನು ಕಾಡುತ್ತಾನೆ.ಅವನ ಪುತ್ರನಾಗಿ ಪ್ರಹ್ಲಾದನು ಪರಮ ಹರಿಭಕ್ತನಾಗಿ ಜನಿಸುತ್ತಾನೆ.ಆಗ ಹಿರಣ್ಯಕಶ್ಯಪುವಿಗೆ ಪುತ್ರನೇ ಶತ್ರುವಾಗುತ್ತಾನೆ. ಹರಿಭಕ್ತ ಎಂಬ ಕಾರಣಕ್ಕೆ ಪುತ್ರನನ್ನು ನಾನಾ ರೀತಿಯಲ್ಲಿ ಹಿಂಸಿಸುತ್ತಾನೆ. ಆದರೆ ಭಗವಂತನು ಅವನನ್ನು ಎಲ್ಲ ರೀತಿಯಲ್ಲೂ ಪಾರು ಮಾಡುತ್ತಾನೆ. ಆದರೆ ಬ್ರಹ್ಮನ ಸೃಷ್ಟಿಯ ಯಾವ ಜೀವಿಯಿಂದಲೂ ಸಾವು ಬರಬಾರದು,ಹಗಲಾಗಲೀ,ರಾತ್ರಿಯಾಗಲೀ,ಒಳಗಾಗಲೀ ಹೊರಗಾಗಲೀ,ಮೇಲಾಗಲೀ,ಕೆಳಗಾಗಲೀ,ಆಯುಧ,ಶಸ್ತ್ರಗಳಿಂದಾಗಲೀ ನನಗೆ ಮರಣ ಬರಬಾರದು" ಎಂದು ಬ್ರಹ್ಮನಿಂದ ವರ ಪಡೆದಿದ್ದ ಹಿರಣ್ಯಕಶ್ಯಪನನ್ನು ಸಂಹಾರ ಮಾಡಲು ಶ್ರೀಹರಿಯು ನರಸಿಂಹನಾಗಿ ಅವತಾರ ತಾಳಿ ಕಂಬದಿಂದ ಉದ್ಭವಿಸುತ್ತಾನೆ. #ನರನ_ದೇಹಾಕೃತಿ_ಸಿಂಹದ_ಮುಖ ನರಸಿಂಹನಾಗಿ ಆವಿರ್ಭವಿಸುತ್ತಾನೆ. ಪ್ರಾಣಿಯ ಮುಖ,ಮನುಷ್ಯನ ತಲೆ ಇರುವ ಜೀವಿಯನ್ನು ಬ್ರಹ್ಮ ಆವರೆಗೂ ಸೃಷ್ಟಿ ಮಾಡಿರುವುದಿಲ್ಲ. ನರಸಿಂಹನು ಉಗ್ರನಾಗಿ ವಿಜೃಂಭಿಸಿ, ಸೂರ್ಯಮುಳುಗಿ,ಕತ್ತಲಾಗುವ ಮುನ್ನ ಸಂಧ್ಯಾಕಾಲದಲ್ಲಿ ಅವನ ಅರಮನೆಯ ಮಹಾದ್ವಾರದ ಹೊಸ್ತಿಲ ಮೇಲೆ ಒಂದು ಕಾಲು ಒಳಗೆ,ಒಂದು ಕಾಲು ಹೊರಗೆ ಇಟ್ಟುಕೊಂಡು,ತೊಡೆಯ ಮೇಲೆ ರಾಕ್ಷಸನನ್ನು ಮಲಗಿಸಿಕೊಂಡು,ತನ್ನ ಚೂಪಾದ ಉಗುರುಗಳಿಂದ ಅವನ ಹೊಟ್ಟೆಯನ್ನು ಸೀಳಿ,ಬಗೆದು ಕರುಳನ್ನು ಹೊರತೆಗೆದು ಹಾರದಂತೆ ಕೊರಳಿಗೆ ಹಾಕಿಕೊಂಡು,ರಕ್ತವನ್ನು ಹೀರಿ ದುಷ್ಟ ಹಿರಣ್ಯಕಶ್ಯಪುವನ್ನು ಸಂಹಾರಮಾಡಿದನು.
ಭಯಗೊಂಡಿದ್ದ ಪ್ರಹ್ಲಾದನನ್ನು ಸಂತೈಸಿ,ವಿಷ್ಣುಭಕ್ತನಾಗಿ ಬಹುಕಾಲ ರಾಜ್ಯವನ್ನಾಳಿ,ದೇಹಾಂತ್ಯವಾದ ಮೇಲೆ ವೈಕುಂಠಕ್ಕೆ ಬಾ ಎಂದು ವರವನ್ನಿತ್ತು ನರಸಿಂಹನು ಅಂತರ್ಧಾನನಾದನು.
Posted 21/5/2024
No comments:
Post a Comment