April 28, 2024
ಜ್ವರ - ಶೋಭಾಳ ಲೇಖನ
ಜೋರಾದ ಜ್ವರ ಬರದೇ ಸ್ವಲ್ಪ ಕಾಲವಾಗಿತ್ತು. ಆಗಾಗ್ಗೆ ಜ್ವರವಿರಬಹುದೆಂಬ ‘ಗಿರ’ ಬಿಟ್ಟರೆ ಮೈಯಿಡೀ ಕೆಂಡದಂತೆ ಕಾದ ಜ್ವರ ಬಂದಿರಲಿಲ್ಲ. ಕಳೆದ ಮೂರು ದಿನಗಳಿಂದ ಜ್ವರದ ತಾಪ ತನ್ನ ಪ್ರತಾಪವನ್ನು ನನ್ನ ಮೇಲೆ ತೋರಿಸುತ್ತಿದೆ.
ಈಗ್ಗೆ ಒಂದು ವಾರದಿಂದ ಗಂಟಲ ಕೆರೆತ, ಸುಸ್ತು ಎಲ್ಲಾ ಇದ್ದಿತ್ತು. ಸಡನ್ನಾಗಿ ಬಂದ ಮಳೆ - ಕಾದ ಇಳೆ, ಮನೆ ರಿಪೇರಿಯ ಧೂಳಿನ ಪರಿಣಾಮ ನನ್ನ ಮೇಲಾಗಿರಬಹುದೆಂದು ನಾನು ಅದನ್ನು ಕಡೆಗಣಿಸಿದೆ. ಹತ್ತು ಹಲವಾರು ದಿವಸಗಳಿಂದ ತುಂಬಿಕೊಂಡಿದ್ದ ಮನೆ ಮೊನ್ನೆ ಖಾಲಿಯಾಗುವುದಕ್ಕೂ ಮಾರನೇ ದಿವಸ ನಾನು ಗಂಟಲು ಉರಿಯೊಂದಿಗೆ ಏಳುವುದಕ್ಕೂ ಸರಿಯಾಯಿತು. ಸ್ವರ ಭಾರವಾಗಿ - ತಲೆ ಭಾರವಾಗಿ - ದೇಹವೂ ಭಾರವಾಗಿ ಬಹಳಷ್ಟು ಅಸೌಖ್ಯ ಕಾಣಿಸಿಕೊಂಡರೂ ಮೊದಲ ದಿನ ಜೀರಿಗೆಯ ಹಸಿಬಿಸಿ ಕಷಾಯ ಕುಡಿದು ಸರಿಮಾಡಿಕೊಳ್ಳಲು ಪ್ರಯತ್ನಿಸಿದೆ. ರಾತ್ರಿ ಜ್ವರದ ತಾಪದಲ್ಲಿ ಬೆಂದು ನಿದ್ರೆ ಸರಿಯಾಗಿ ಬರದ ಕಾರಣ ಮಾರನೇ ದಿವಸ ಕಷಾಯದೊಂದಿಗೆ ಪ್ಯಾರಸಿಮಾಲ್ ಸೇರ್ಪಡೆಯಾಯಿತು. ಇಡೀ ದಿವಸ ಕೊಚ್ಚಿಗೆ ಅಕ್ಕಿಯ ಗಂಜಿ ನನ್ನ ಆಹಾರವಾಯಿತು. ಮಧ್ಯಾಹ್ನದ ಹೊತ್ತಿಗೆ ಜ್ವರದ ಸುಸ್ತು, ಗಂಟಲ ಉರಿ, ಕೆಮ್ಮು ತಾಳದಾದಾಗ ಡಾಕ್ಟರ್ ಸೊಸೆಗೆ ಫೋನಾಯಿಸಿ ಔಷಧಿ ಕೇಳಿಕೊಂಡು ಸಾಗರದಿಂದ ತರಿಸಿ ಸೇವಿಸಿದೆ. ಸಂಜೆಯ ಹೊತ್ತಿಗೆ ಸ್ವಲ್ಪ ಉತ್ತಮ ಅನಿಸಿದ ಕಾರಣ ಜ್ವರದ ಮಾತ್ರೆ ಬಿಟ್ಟು ಉಳಿದ ಮಾತ್ರೆ ತಗೊಂಡು ಮಲಗಿದವಳಿಗೆ ರಾತ್ರಿ ಕೆಂಡಾಮಂಡಲ ಜ್ವರ! ರಾತ್ರಿ ನಿದ್ರೆ ಬಾರದೆ ಬಹಿರ್ದೆಸೆಗೆ ಹಲವಾರು ಸಲ ಎದ್ದರೂ ಜ್ವರದ ಮಾತ್ರೆ ತಗೊಳ್ಳಬೇಕು ಎನ್ನುವುದು ನನ್ನ ಪರಿಜ್ಞಾನಕ್ಕೆ ಬರಲೇ ಇಲ್ಲ. ಬೆಳಿಗ್ಗೆ ಯಥಾಪ್ರಕಾರ ಬೇಗ ಎದ್ದು ಆ ಸುಸ್ತಿನಲ್ಲಿಯೇ ಗಂಜಿ ಮಾಡಿಕೊಂಡು, ನಾಯಿಗೆ ಅನ್ನ ಮಾಡಿ ಕೂರಲು ಆಗದೇ ಪುನಃ ಒಂದು ತಾಸು ಮಲಗಿದೆ. ಎದ್ದವಳು ಗಂಜಿ ತಿಂದು, ಮಾತ್ರೆ ಸೇವಿಸಿ ಸ್ನಾನ ಮಾಡಿದವಳ ಮೈ ಧಾರಾಕಾರವಾಗಿ ಬೆವರತೊಡಗಿತು. ಸುಸ್ತು ಜಾಸ್ತಿಯಾಗಿ ಮಲಗಿದವಳಿಗೆ ಈ ಲೋಕದ ಪರಿಜ್ಞಾನವೇ ಇಲ್ಲದಂತೆ ಮೂರು ತಾಸು ಹೊಡೆದು ಹಾಕಿದ ಹಾಗೆ ನಿದ್ರೆ ಬಂದಿತು. ಎದ್ದವಳು ಅಳಿದುಳಿದ ಗಂಜಿ ತಿಂದು ವಿರಮಿಸಿದೆ. ಈಗ ಆರೋಗ್ಯ ಸುಧಾರಿಸುತ್ತಿರುವಂತೆ ಕಾಣುತ್ತಿದೆ. ದೇಹ ರೆಸ್ಟ್ ಬಯಸುತ್ತಿದೆ. ಬಲ್ಲವರು ಹೇಳುತ್ತಾರೆ “ಜ್ವರಕ್ಕೆ ದೈಹಿಕ ವಿರಾಮ ನೀಡುವುದೇ ಉತ್ತಮ ಔಷಧಿ” ಎಂದು. ನನ್ನ ವಿಚಾರದಲ್ಲಿ ದೈಹಿಕ ವಿರಾಮ ನೀಡುವುದಕ್ಕಿಂತ ದೈಹಿಕ ವಿರಾಮ ನನ್ನ ದೇಹವೇ ಡಿಮಾಂಡ್ ಮಾಡುತ್ತಿದೆ ಎಂದರೆ ತಪ್ಪಾಗಲಾರದು.
ಏರು ಜವ್ವನದಲ್ಲಿ ಇಂತಹ ಜ್ವರಕ್ಕೆಲ್ಲ ನದರಿಸದ ನಾನು(ಪ್ರಾಯಶಃ ನನ್ನಂತಹ ಹೆಚ್ಚಿನ ಜನರು) ವಯಸ್ಸು ತನ್ನ ಛಾಪು ತೋರಿಸುತ್ತಿರುವ ಈ ಸಂದರ್ಭದಲ್ಲಿ ಅದರ ತಾಪಕ್ಕೆ ಶರಣಾಗಬೇಕಾದ ಸ್ಥಿತಿ ಬಂದಿರುವುದು ಎಂತಹ ವಿಪರ್ಯಾಸವಲ್ಲವೆ?! ಕಾಲಾಯ ತಸ್ಯೈ ನಮಃ
Posted 15/5/2024
No comments:
Post a Comment