May 2, 2024
HONGIRANA SCHOOL OF EXCELLENCE
2003 ರಲ್ಲಿ ನಾವು ಹೊಂಗಿರಣ ಶಾಲೆಯನ್ನು ಪ್ರಾರಂಭಿಸಿದಾಗ ಪದವಿ ಪೂರ್ವ ಕಾಲೇಜು ಪ್ರಾರಂಭಿಸುವ ಎಳ್ಳಷ್ಟು ಕಲ್ಪನೆಯು ನಮ್ಮಲ್ಲಿರಲಿಲ್ಲ. ಶಾಲೆ ಪ್ರಾರಂಭಿಸಿ ಒಂದೆರಡು ವರ್ಷಗಳಾದಾಗ ಪದವಿ ಪೂರ್ವ ಶಿಕ್ಷಣಕ್ಕಾಗಿ ಮಲೆನಾಡಿನ ಮಕ್ಕಳು ಘಟ್ಟದ ತಗ್ಗು ಇಳಿಯುವುದನ್ನು ನೋಡಿದಾಗ “ಇಲ್ಲಿ ಇಲ್ಲದ್ದು ಅಲ್ಲೇನು ಸಿಗುತ್ತಿದೆ? ನಾವ್ಯಾಕೆ ಒಳ್ಳೆಯ ಗುಣಮಟ್ಟದ ಪದವಿ ಪೂರ್ವ ಕಾಲೇಜನ್ನು ಸ್ಥಾಪಿಸಿ ಅದಕ್ಕಿಂತ ಮಿಗಿಲಾದದ್ದನ್ನು ಇಲ್ಲೇ ಪಡೆಯಬಹುದು ಎಂದು ನಿರೂಪಿಸಿ ತೋರಿಸಬಾರದು” ಎನ್ನುವ ಯೋಚನೆ ಬಂದಿದ್ದರ ಫಲ 2006ರಲ್ಲಿ ಪ್ರಾರಂಭಿಸಿದ ನಮ್ಮ ವಸತಿ ಸಹಿತ ವ್ಯವಸ್ಥೆಯ ಹೊಂಗಿರಣ ಪದವಿ ಪೂರ್ವ ಕಾಲೇಜು.ನಾವು ಈವರೆಗೆ ಯಾರೊಡನೆಯೂ ಸ್ಪರ್ಧೆಗೆ ಇಳಿಯದೆ ಜೀವನದ ನಿರ್ಣಾಯಕ ಘಟ್ಟ ಎನ್ನಬಹುದಾದ ಪದವಿ ಪೂರ್ವ ಶಿಕ್ಷಣದ ಹಂತದಲ್ಲಿ ಮಕ್ಕಳಿಗೆ ಅಗತ್ಯವಿರುವ ಕಲಿಕಾ ವಿಷಯ ಪರಿಕಲ್ಪನೆ ಕೊಡುವುದರೊಂದಿಗೆ ಸಮಂಜಸವಾದ ಕಲಿಕೆಯ ವಿಧಾನವನ್ನು ರೂಢಿಸಿಕೊಳ್ಳುವ ಅಭ್ಯಾಸವನ್ನು ಮೈಗೂಡಿಸಿಕೊಳ್ಳುವಂತೆ ಮಾಡುವ ಪರಿಸರವನ್ನು ಕಟ್ಟಿದ್ದೇವೆ. ಅಷ್ಟೇ ಅಲ್ಲದೆ ನಮ್ಮಿಂದ ಕಲಿತು ಹೊರಹೋಗುವ ಪ್ರತಿ ಮಗುವೂ ತನ್ನ ಮುಂದಣ ಬದುಕಿನ ಬಗ್ಗೆ ಸೂಕ್ತ ವಿಚಾರ ಮಾಡುವ ಪ್ರಬುದ್ಧತೆಯನ್ನು ಹೊಂಗಿರಣ ಪದವಿ ಪೂರ್ವ ಕಾಲೇಜು ಕೊಡುತ್ತಿದೆ ಎನ್ನುವುದನ್ನು ಈಗಾಗಲೇ ಹೊರಹೋಗಿರುವ ನಮ್ಮ 18 ಬ್ಯಾಚಿನ ಮಕ್ಕಳು ಸಾಬೀತು ಪಡಿಸಿದ್ದಾರೆ.
ಹೊಂಗಿರಣ ಪಿ ಯು ಕಾಲೇಜಿನ ವಿಶಿಷ್ಟತೆ ಏನೆಂದರೆ ದಾಖಲಾತಿಗೆ ಇರುವ ಮುಕ್ತ ಅವಕಾಶ. ಹತ್ತನೇ ತರಗತಿಯಲ್ಲಿ 625ಕ್ಕೆ 624 ಅಂಕ ಪಡೆದ ಮಗುವಿಗೂ ಹಾಗೆಯೇ ಕೇವಲ ಐವತ್ತು, ಅರವತ್ತು ಪರ್ಸೆಂಟ್ ಬಂದಿರುವ ಮಗುವಿಗೂ ಇಲ್ಲಿ ಕಲಿಯುವ ಹಕ್ಕು ಸಮಾನವಾಗಿದೆ. ವಿಜ್ಞಾನ ವಿಭಾಗದ ಕಾಲೇಜಾದರೂ ಯಾವುದೇ ಮಗುವಾದರೂ ಅದರ ಹತ್ತನೆಯ ತರಗತಿಯ ಫಲಿತಾಂಶ ಎಷ್ಟೇ ಬಂದಿದ್ದರೂ ಅದರ ಕಲಿಕಾ ಆಸಕ್ತಿಯನ್ನು ಆಧರಿಸಿ ಮುಕ್ತ ದಾಖಲಾತಿಗೆ ಅವಕಾಶ ನೀಡಲಾಗುವುದು. ನಮ್ಮಲ್ಲಿ ವಿಜ್ಞಾನ ವಿಷಯವನ್ನು ಯಾವುದೇ ಒತ್ತಡ ಇಲ್ಲದೆ ಬೆಳಗಿನ ಒಂಬತ್ತರಿಂದ ಸಾಯಂಕಾಲ ನಾಲ್ಕು ಗಂಟೆಯವರೆಗೆ ಆಸಕ್ತಿಯಿಟ್ಟು ಕಲಿಯುವಂತೆ ಮಾಡುವುದು ಇನ್ನೊಂದು ವಿಶಿಷ್ಟತೆ. ಹಾಸ್ಟೆಲ್ ನಲ್ಲಿ ಇರುವ ಮಕ್ಕಳಿಗೆ ಇದಕ್ಕೆ ಹೊರತಾಗಿ ದಿನಕ್ಕೆ ನಾಲ್ಕೈದು ತಾಸು ಅವರದೇ ಓಘದಲ್ಲಿ ಕಲಿಯುವ ವಾತಾವರಣವನ್ನು ಸೃಷ್ಟಿಸಲಾಗಿದೆ. ಇದರೆಲ್ಲದರ ಫಲವಾಗಿ ಹತ್ತನೇ ತರಗತಿಯಲ್ಲಿ ಐವತ್ತು, ಅರವತ್ತು ಪರ್ಸೆಂಟ್ ಪಡೆದು ನಮ್ಮಲ್ಲಿ ದಾಖಲಾದ ಮಕ್ಕಳು ದ್ವಿತೀಯ ಪಿಯುಸಿಯಲ್ಲಿ ಎಂಬತ್ತಕ್ಕೂ ಹೆಚ್ಚು ಪರ್ಸೆಂಟ್ ಪಡೆದ ದಾಖಲೆಗಳು ಪ್ರತಿ ಬ್ಯಾಚಿನಲ್ಲಿಯೂ ಇದೆ. ಹಾಗೆಯೇ ಉತ್ತಮ ಗುಣಮಟ್ಟದ ಅಂಕ ಗಳಿಸಿ ಬಂದವರು ಅದನ್ನು ಉಳಿಸಿಕೊಂಡು ನೂರರಲ್ಲಿ ನೂರು ಅಂಕ ಗಳಿಸಿ ತಮ್ಮ ಕಲಿಕಾ ಮಟ್ಟವನ್ನು ಕಾಪಾಡಿಕೊಂಡು ಬಂದಿದ್ದಾರೆ ಕೂಡಾ. ಇಂತಹ ಕಲಿಕಾ ಉನ್ನತಿ ಆಗಬೇಕೆಂದರೆ ಹೊಂಗಿರಣ ಸೃಷ್ಟಿಸಿರುವ ಕಲಿಕಾ ಪರಿಸರ ಹಾಗೂ ಅಲ್ಲಿನ ಪ್ರಾಧ್ಯಾಪಕರ ಸಮರ್ಪಣಾ ಭಾವ ಗಣನೀಯವಾದುದು.
ಹೊಂಗಿರಣದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದ ಹಳೆಯ ವಿದ್ಯಾರ್ಥಿಗಳು ಈಗ ಉತ್ತಮ ವೈದ್ಯರು, ಇಂಜಿನಿಯರ್, ವಿಜ್ಞಾನಿಗಳು, ವಾಣಿಜ್ಯೋದ್ಯಮಿಗಳು, ಶಿಕ್ಷಕರು, ಸೃಜನಶೀಲ ಕಲಾವಿದರು, ಕೃಷಿಕರು….. ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ತಮ್ಮ ಛಾಪನ್ನು ಮೂಡಿಸಿದ್ದಾರೆ. ಹೊಂಗಿರಣದಿಂದ ತಮಗೆ ಪಠ್ಯ ಹಾಗೂ ಪಠ್ಯೇತರವಾಗಿ ದೊರೆತದ್ದನ್ನು ಸಂಪೂರ್ಣವಾಗಿ ತಮ್ಮ ಬೆಳವಣಿಗೆಯಲ್ಲಿ ಅಳವಡಿಸಿಕೊಂಡು ಬೆಳೆಯುತ್ತಿದ್ದಾರೆ ಎನ್ನುವುದು ನಮ್ಮ ಮೂಲ ಉದ್ದೇಶದ ಸಾರ್ಥಕತೆಯನ್ನು ತೋರಿಸಿಕೊಡುತ್ತದೆ.
ಇದೆಲ್ಲದರ ಜೊತೆಗೆ ರಾಜ್ಯಮಟ್ಟದ ಗುಣಮಟ್ಟದೊಂದಿಗೆ ನಮ್ಮ ಕಾಲೇಜಿನಲ್ಲಿ CET NEET JEE ಕೋಚಿಂಗ್ ಅನ್ನು ಸಹ ನೀಡಲಾಗುತ್ತಿದೆ. ಪ್ರಾಯಶಃ ಸಿಇಟಿ ಕೋಚಿಂಗ್ ಆರಂಭಿಸಿದ ಸಾಗರದ ಮೊಟ್ಟಮೊದಲ ಪಿ ಯು ಕಾಲೇಜು ನಮ್ಮದೇ. ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಬಹು ಮುಖ್ಯ ಭೂಮಿಕೆಯನ್ನು ನಿಭಾಯಿಸುತ್ತಿರುವ ಈ ಪ್ರವೇಶ ಪರೀಕ್ಷೆಗಳು ಕಬ್ಬಿಣದ ಕಡಲೆಯಲ್ಲ, ಉತ್ತಮ ತರಬೇತಿ ಸಿಕ್ಕರೆ ನಮ್ಮ ಮಕ್ಕಳು ಕೂಡ ದೊಡ್ಡ ಸಾಧನೆ ಮಾಡಬಲ್ಲರು ಎಂಬುದನ್ನು ಅರಿತು, ರಾಜ್ಯಮಟ್ಟದ ಅನುಭವಿ ಹಾಗೂ ನುರಿತ ಉಪನ್ಯಾಸಕರನ್ನು ಆಹ್ವಾನಿಸಿ ನಮ್ಮ ಕ್ಯಾಂಪಸ್ ನಲ್ಲಿ ವರ್ಷಪೂರ್ತಿ ತರಬೇತಿ ನೀಡಲಾಗುತ್ತಿದೆ. ಈ ವರ್ಷದಿಂದ ಪರಿಣಿತ್ ಅಕಾಡೆಮಿಯ ಮೂಲಕ ಇನ್ನಷ್ಟು ಉತ್ಕೃಷ್ಟ ಗುಣಮಟ್ಟದ ತರಬೇತಿಯನ್ನು ನಮ್ಮ ಕಾಲೇಜು ನೀಡಲಿದೆ.
2024ರಲ್ಲಿ ಹೊಂಗಿರಣ ಪದವಿ ಪೂರ್ವ ಕಾಲೇಜಿನ ವಿಶೇಷ ಸಾಧನೆಯೆಂದರೆ ಶೇಕಡಾ 100 ಗುಣಮಟ್ಟದ ಫಲಿತಾಂಶದೊಂದಿಗೆ, ನಮ್ಮ ವಿದ್ಯಾರ್ಥಿನಿ ಸವಿ ಪ್ರಸಾದ್ ಆರು ನೂರಕ್ಕೆ 590 ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ಒಂಬತ್ತನೇ ರ್ಯಾಂಕ್ ಪಡೆದಿರುವುದು. ಇದರ ಜೊತೆಗೆ ಶೇಕಡ 60ರಷ್ಟು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿರುವುದು ನಮ್ಮ ಗುಣಮಟ್ಟದ ಶಿಕ್ಷಣಕ್ಕೆ ಸಿಕ್ಕ ಪ್ರತಿಫಲ ಎಂದರೆ ತಪ್ಪಾಗಲಾರದು.
ಗುಣಮಟ್ಟದ ಪಿ ಯು ಶಿಕ್ಷಣ, ಅತ್ಯುತ್ತಮವಾದ ಸಿಇಟಿ ನೀಟ್ ಮತ್ತು ಜೆಇಇ ತರಬೇತಿ, ವಿದ್ಯಾರ್ಥಿಗಳಿಗೆ ಭವಿಷ್ಯದ ಆಯ್ಕೆಗಳ ಬಗ್ಗೆ ತರಬೇತಿ, ಒತ್ತಡ ರಹಿತ ವಾತಾವರಣದಲ್ಲಿ ಸದೃಢವಾದ ಮಾನಸಿಕ ಸಾಮರ್ಥ್ಯದೊಂದಿಗೆ ಸಮಾಜಕ್ಕೆ ಉತ್ತಮ ನಾಗರಿಕರನ್ನು ಒದಗಿಸಿಕೊಡುವ ಕೈಂಕರ್ಯಕ್ಕೆ ಹೊಂಗಿರಣ ಪಿ ಯು ಕಾಲೇಜು ಸದಾ ಕಟಿಬದ್ಧವಾಗಿದೆ.
Posted 9/5/2024
No comments:
Post a Comment