Wednesday, December 31, 2025

"ಹಕ್ಕಿ ಮತ್ತು ಅವಳು"- ನಾಟಕ SANGEETHA MAALIKE -2025 :

 ಶನಿವಾರ, ದಶಂಬರ 27, 2025 

ಬಿರ್ತಿ ಮನೆ, ಸಾಲಿಕೇರಿ , ಬ್ರಹ್ಮಾವರ  

ಹಕ್ಕಿ ಮತ್ತು ಅವಳು 


ಕನ್ನದಲ್ಲಿಯ ಮತ್ತು ಕನ್ನಡಕ್ಕೆ ಒದಗಿ ಬಂದ ಕವನ, ಕಥೆ, ಪ್ರಬಂಧಗಳನ್ನು ಆಧರಿಸಿದ ಕಾವ್ಯ ಪ್ರಯೋಗವಿದು. ಕಾವ್ಯ ಪ್ರಯೋಗದ ರಂಗದಾಟ , ಹೆಣ್ಣಿನ ಬಿಡುಗಡೆಯ ಹಾಡುಗಳನ್ನು ಇಲ್ಲಿ ಅಭಿನಯಿಸಲಾಗುತ್ತಿದೆ. 



ಕಾವ್ಯ ಹಂದೆ ಈ ಕಾವ್ಯಭಿನಯವನ್ನು ಅದ್ಭುತವಾಗಿ ಪ್ರದರ್ಶಿಸಿದ್ದಾಳೆ.   


ದೇಹ, ದೇಶಗಳನ್ನು ಬಂಧಿಸಲ್ಪಟ್ಟ "ಅವಳು", ತನ್ನ ಬಿಡುಗಡೆಯನ್ನು ಕಾಣಸುವ ಆಟವಿದು. ಸ್ವಾತಂತ್ರ್ಯದ ಆಟ,  ಸ್ವಾತಂತ್ರ್ಯದ ಬಗ್ಗೆ ಮಾತನಾಡುವುದೆಂದರೆ ಅದು ನೋವಿನಿಂದ ಬಿಡುಗಡೆ ಪಡೆಯುವ ಹಾದಿಯೂ ಹೌದು. ತಿಳಿಯುವ ಸತ್ಯ ನೋಯಿಸ ಬಲ್ಲುದು, ಆದರೆ ತಿಳಿಯದೇ ಹೋಗುವ ಸತ್ಯ  ಕೊಲ್ಲಬಹುದು. 


ಅರಿವಿನಿಂದಲೇ ನೋವ ಬಗೆಯ ಆಸಕ್ತಿಯಲ್ಲಿ ಇದು ರೂಪು ತಳೆದಿದೆ. ನಮಗೆ ನಂಬಿಕೆ ಇದೆ.  "ಒಂದಲ್ಲ ಒಂದು ಮಿದು ಜಾಗವುಂಟು ನಮ್ಮೆಲರಲ್ಲಿ" - ಈ ನಂಬಿಕೆಯೇ ಇಂತಹ ಪ್ರಯೋಗಕ್ಕೆ  ಇಂಬು ನೀಡುವದು. 





ಬಂಧನಗಳ ಮೂಲದ ಹುಡುಕಾಟದಲ್ಲಿ ಈ ನೆಲದಗಳ, ಜಲದಗಳ , ಮುಗಿಲಗಲ ಹರವಿಕೊಂಡ ಬಿಡುಗಡೆಯ ನುಡಿಗಳನ್ನು ಆಯ್ದು ಪೋಣಿಸಿ ಕೊಂಡಿರುವೆವಿಲ್ಲಿ , ಚಾವೊಸನ ಪತಂಗ ಪರಿಣಾಮ ಸಿದ್ಧಾಂತ ಹೇಳುವಂತೆ "ಎಲ್ಲೋ ಬಡಿಯುವ ಚಿಟ್ಟೆಯ ರೆಕ್ಕೆಗಳು ಮತ್ತೆಲ್ಲೋ  ಬಿರುಗಾಳಿ ಎಬ್ಬಿಸಬಹುದು" ಎಂಬ ನಂಬಿಕೆಯಿಂದ . 
ಮಿತ್ರಾ ವೆಂಕಟರಾಜು, ವೈದೇಹಿ, ಪ್ರತಿಭಾ ನಂದ ಕುಮಾರ,ಚಿಮ ಮಾಂಡ , ಮಾಯಾ ಎಂಜಎಲೊ, ಲಾಟೇಶ,  ಅಭಿಲಾಶ ಎಸ್. ಅವರ ಬರಹಗಳನ್ನು ಇಲ್ಲಿ ಪಠ್ಯ ವಾಗಿ ಬಲಸಿಕೊಳ್ಳಲಾಗಿದೆ,


ಭಿನ್ನ ಭಾಷೆಯ ಇಲ್ಲಿಯ ಕೆಲವು ಪಠ್ಯ ಗಳನ್ನು  ಕನ್ನಡದ ವಿವೇಕಕ್ಕೆ ಒದಗಿಸಿ ಕೊಟ್ಟವರು ಜ. ನಾ. ತೇಜಶ್ರೀ, ಸುಧಾ ಅಡುಕಳ, ಕಾವ್ಯ ಶ್ರೀ ಎಚ್., ಇವರೆಲ್ಲಾರಿಗೂ ನಾವು ಋಣಿಗಳು.    


ಕಾವ್ಯಾಳ ಅಭಿನಯ, ನೃತ್ಯ, ಸಂಭಾಷಣೆ, ಹಾಗೂ ಮುಖಭಾವ ಎಲ್ಲವೂ ತುಂಬಾ ಚಂದ. 
ರಂಗ ವಿನ್ಯಾಸ, ಬೆಳಕು, ಸಂಗೀತ ಎಲ್ಲವೂ ಆಕರ್ಷಕವಾಗಿತ್ತು. 








Abhilasha S in her Faceook post : 3/1/2026

ಡಿಸೆಂಬರ್ 27ರ ನಮ್ಮ‌ ಸಂಗೀತ ಸಂಜೆಯ ಇನ್ನೊಂದು ಮುಖ್ಯ ಕಾರ್ಯಕ್ರಮ ಸುವಿಕಾ ತಂಡದ ಕಾವ್ಯ ಹಂದೆ ಯವರ "ಹಕ್ಕಿ ಮತ್ತು ಅವಳು" ಏಕವ್ಯಕ್ತಿ ನಾಟಕ ಪ್ರದರ್ಶನ.
ಮಿತ್ರಾ ವೆಂಕಟ್ರಾಜ್ ಅವರ ಹಕ್ಕಿ ಮತ್ತು ಅವಳು ಕಥೆಯ ಜೊತೆ ಮಹಿಳಾ ಸಂವೇದೀ ಕವನಗಳನ್ನು ರಂಗ ಪ್ರಯೋಗವಾಗಿಸಿದ್ದು ಇಲ್ಲಿನ ವಿಶೇಷ. ಚಿಮಮಾಂಡ, ವೈದೇಹಿ, ಪ್ರತಿಭಾ ನಂದಕುಮಾರ್, ಕೆ.ವಿ.ತಿರುಮಲೇಶ್, ಅಭಿಲಾಷಾ, ಸುಧಾ ಆಡುಕಳ‌- ಹೀಗೆ ಅನೇಕರು "ಕನ್ನಡಿಯೊಳಗೆ ಅಡಗಿರುವ ರಾಜಕುಮಾರಿಯರು" ಕನ್ನಡಿಯೊಡೆದು ಹೊರಬಂದು ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳುವ ಬಗೆಯನ್ನು ಬರಹವಾಗಿಸಿದರೆ ಆ ಬರಹಗಳನ್ನು ನಟಿ ಕಾವ್ಯ ಸಶಕ್ತವಾಗಿ ರಂಗ ಕಾವ್ಯವಾಗಿಸಿದ್ದಳು. ನೈಜೀರಿಯಾದ ಚಿಮಮಾಂಡ ತನ್ನ ಸ್ನೇಹಿತೆಗೆ ಅವಳ ಮಗಳನ್ನು ಬೆಳಸುವ ಬಗೆಗೆ ನೀಡುವ ಸಲಹೆಯೊಂದಿಗೆ ಬಹಳ ಸರಳವಾಗಿ ಪ್ರಾರಂಭವಾಗುವ ನಾಟಕ ಮುಂದೆ ಭಾವ ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತ ಸಾಗುತ್ತದೆ. ತನ್ನ ಮನೆಯವರಿಂದಲೇ ತನಗಾಗುತ್ತಿರುವ ಲೈಂಗಿಕ ಶೋಷಣೆಯನ್ನು ವಿವರಿಸುವ ಪುಟ್ಟ ಬಾಲಕಿಯಾಗಿ " ನಾನೇಕೆ ಬರೆಯುತ್ತೇನೆ" ಎಂದು ಕಾವ್ಯ ಮಗ್ಧವಾಗಿ ಅಭಿನಯಿಸುತ್ತದ್ದರೆ , ಆ ತೀಕ್ಷ್ಣತೆ ನೋಡುಗರನ್ನು ಬೆಚ್ಚಿ ಬೀಳಿಸುವಂತಿತ್ತು. ಗಟ್ಟಿಗಿತ್ತಿ ಸೀತೆ, ಸುಕೋಮಲೆಯಾಗುತ್ತ ಅಸಹಾಯಕಳಾಗಿ ಪರಿತಪಿಸುತ್ತಾ ಮತ್ತೆ ಅಶೋಕ ವನವೇ ಆದ ಕತೆಯನ್ನು ಅಪೂರ್ವವಾದ ನೃತ್ಯದ ನಡೆಯ ಮೂಲಕ ಪ್ರಸ್ತುತ ಪಡಿಸಿ ಈ ಭಾಗವನ್ನು ನಟಿ ದೃಶ್ಯಕಾವ್ಯವಾಗಿಸಿದಳು. ಅಡುಗೆ ಮನೆ ಹುಡುಗಿಯರು ಹೊರದಾರಿಗಾಗಿ ಹಂಬಲಿಸುವ ಪರಿ ನಗೆಯುಕ್ಕಿಸುತ್ತಲೇ ಹಸಿ ವಾಸ್ತವವನ್ನು ಬಿಚ್ಚಿಟ್ಡಿತ್ತು. ದೇವೀ ಮಹಾತ್ಮೆ ಯ ದೇವಿ " ಪ್ರತಿ ನಿತ್ಯ ಹೆಣ್ಣುಗಳ ಮುಡಿಗೆ ಕೈ ಹಾಕುವ ಭಂಡರಿಗೆ" ಮಾತಿನಿಂದಲೇ ಚಾಟಿ ನೀಡಿದರೆ, "ಹಕ್ಕಿ ಮತ್ತು ಅವಳು" ಕತೆಯ ಆರತಿ ಹಕ್ಕಿಯ ಮಾತು ಕೇಳಿಸಿಕೊಳ್ಳುತ್ತಲೇ ತನಗೂ ರೆಕ್ಕೆ ಮೂಡಿಸಿಕೊಳ್ಳುತ್ತಾಳೆ. ಆರತಿಯ ಮನದಲ್ಲಾಗುವ ತಲ್ಲಣಗಳನ್ನು ಕಾವ್ಯ ಚೌಕಟ್ಟಿನೊಳಗೆ ಮುಖವಿಟ್ಟು ಅಭಿನಯಿಸಿದ್ದು, ಭಾವ ನಿವೇದಿಸಿಕೊಂಡದ್ದು ನೋಡುಗರ ಹೃದಯವನ್ನೇ ತಲ್ಲಣಗೊಳಿಸಿತ್ತು. ಈ ಭಾಗದಲ್ಲಿ ನಟಿಯ ಸೂಕ್ಷ್ಮ ಅಭಿನಯ ಉತ್ತುಂಗಕ್ಕೇರಿತ್ತು. ನಂತರದ ದಾಕ್ಷಾಯಿಣಿ ಪ್ರಸಂಗ ಯಕ್ಷಗಾನೀಯ ಮಾದರಿಯಲ್ಲಿದ್ದು ನಟಿಯ ಕುಣಿತ, ಅಬ್ಬರದ ಚಲನೆ ಇವೆಲ್ಲವೂ ಭಾವದ ಇನ್ನೊಂದು ಮಜಲನ್ನು ಸಾಕ್ಷಾತ್ಕರಿಸಿದವು.ಕೊನೆಯಲ್ಲಿ ಅರ್ಧನಾರೀಶ್ವರನ ಕಲ್ಪನೆಯೊಂದಿಗೆ ಮುಕ್ತಾಯವಾದ ಈ ರಂಗ ಪ್ರಯೋಗ ತಾತ್ವಿಕ ಕೊನೆ ಮುಟ್ಟಿತ್ತು.
ಇಂತದ್ದೊಂದು ಅಪೂರ್ವ ರಂಗ ಪ್ರಯೋಗವನ್ನು ವಿನ್ಯಾಸ ಮಾಡಿ ನಿರ್ದೇಶಿಸಿದವರು ಖ್ಯಾತ ರಂಗ ನಿರ್ದೇಶಕ ಡಾ.ಶ್ರೀಪಾದ ಭಟ್. ಆ ದಿನ ಅವರೂ ನಮ್ಮ‌ ಜೊತೆ ಇದ್ದದ್ದು ನಮಗೆ ಇನ್ನಷ್ಡು ಸಂತಸ ತಂದಿತ್ತು.
ಬೆಳಕನ್ನು ನೀಡಿದವರು ರೋಹಿತ್ ಬೈಕಾಡಿ , ಸಂಗೀತದಲ್ಲಿ ಸಹಕರಿಸಿದವರು ವಿನೀತಾ ಹಂದೆ, ಹಾಗಯೇ ಸಂಯೋಜನೆಯಲ್ಲಿ ಜತೆಯಾದವರು Sujayeendra Hande .
Kavya Hande ತನ್ನ ಸ್ನಾತಕೋತ್ತರ ಪದವಿ ಮುಗಿಸಿ ಈಗ ಬೆಂಗಳೂರಿನ " ಪ್ರಯೋಗ" ದಲ್ಲಿ ಕೆಲಸ ಮಾಡುತ್ತಿರುವ ಯುವ ಕಲಾವಿದೆ. ಈಗಾಗಲೇ ಈ ರಂಗ ಪ್ರಯೋಗವನ್ನು ಅನೇಕ ಕಡೆ ಪ್ರದರ್ಶನ ನೀಡಿದ್ದಲ್ಲದೇ " ಶಿಕ್ಷಣದಲ್ಲಿ ರಂಗಭೂಮಿ " ಎಂಬ ಶಿಕ್ಷಕರ ಕಾರ್ಯಾಗಾರದಲ್ಲಿಯೂ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾಳೆ. ಈ ಪ್ರಯೋಗ ಇನ್ನಷ್ಟು ಪ್ರದರ್ಶನ ಕಂಡು ಇನ್ನಷ್ಟು ಮನಸ್ಸುಗಳ ಅರಳುವಿಕೆಗೆ ಕಾರಣವಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ





ಅಭಿನಂದನೆಗಳು.. 

Posted  31/12/2025 













No comments:

Post a Comment