Friday, December 19, 2025

SAROJINI TANTRY - SHRADDHANJALI

 Thursday, Decembr 18, 2025

SAROJINI TANTRY


Beautiful write-up from Shobha Somayaji

ನನ್ನ ಅಮ್ಮನ ದೊಡ್ಡ ತಂಗಿ ಸರೋಜಿನಿ ಚಿಕ್ಕಿ ಸುಮಾರು ಒಂದೂವರೆ ತಿಂಗಳ ಕಾಲ ಆರೋಗ್ಯದ ತೀವ್ರ ಸಮಸ್ಯೆಯಿಂದ ಬಳಲಿ ನಿನ್ನೆ ಮಧ್ಯಾಹ್ನ ತೀರಿಕೊಂಡರು. ಎಂಬತ್ತರ ಹೊಸ್ತಿಲಲ್ಲಿ ಇದ್ದ ಅವರು ಅಷ್ಟು ವಯಸ್ಸಾದಂತೆ ಕಾಣದ ಅವರು ಸದಾ ಉತ್ಸಾಹದ ಚಿಲುಮೆಯಾಗಿದ್ದರು. ಯಾವ ಕಾರ್ಯಕ್ರಮಕ್ಕೆ ಹೋದರೂ ತಮ್ಮ ಗಟ್ಟಿ ಧ್ವನಿ ಹಾಗೂ ನಗುವಿನಿಂದ ಎಲ್ಲರನ್ನೂ ತಟ್ಟಿ ಮಾತನಾಡಿಸಿ ತನ್ನ ಇರುವಿಕೆಯನ್ನು ಸ್ಥಾಪಿಸುತ್ತಿದ್ದರು. ಸದಾ ಶಿಸ್ತಿನ ಉಡುಪು ತೊಟ್ಟು, ಸಿಂಗರಿಸಿಕೊಂಡು ಲವಲವಿಕೆಯಿಂದಿರುತ್ತಿದ್ದ ಅವರು ಅವರ ಮನೆಯ ಜೀವಾಳ. 

ನನ್ನ ಅಮ್ಮನಿಗಿಂತ ಹತ್ತು ವರ್ಷ ಚಿಕ್ಕವರಾಗಿದ್ದ ನನ್ನ ಚಿಕ್ಕಿಗೆ ನನ್ನ ತಂದೆ - ತಾಯಿಯ ಜೊತೆಗೆ ಬಹಳ ಒಡನಾಟ. ಅವರ ಮದುವೆ ಆದ ಮೇಲೂ ನನ್ನ ತಂದೆಯವರು ಅವರಿಗೆ ಕಾಲಕಾಲಕ್ಕೆ ಸಲಹೆ ಸಹಕಾರ ಕೊಟ್ಟು ಅವರ ಕುಟುಂಬದೊಡನೆ ಒಳ್ಳೆಯ ಸಂಬಂಧ ಹೊಂದಿದ್ದರು.

ಶ್ರೀನಿವಾಸ ತಂತ್ರಿಯವರನ್ನು ವಿವಾಹವಾಗಿ ಸುಮಾರು ಅರವತ್ತೆರಡು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ನನ್ನ ಚಿಕ್ಕಿಯದ್ದು ಹೋರಾಟದ ಬದುಕು. ಮೂರು ಮಕ್ಕಳನ್ನು ಬೆಳೆಸುತ್ತಾ ಮೈಸೂರಿನ ಸರಸ್ವತಿಪುರಂ ನಲ್ಲಿ ಒಂದು ಪುಟ್ಟ ಕ್ಯಾಂಟೀನ್ ಅನ್ನು ಸುಮಾರು ಮೂವತ್ತು ವರ್ಷಗಳ ಕಾಲ ನಡೆಸಿ ಉತ್ತಮ ಬದುಕು ಕಟ್ಟಿಕೊಂಡ ಆ ದಂಪತಿಗಳ ಶ್ರಮಕ್ಕೆ ಎಲ್ಲರೂ ತಲೆದೂಗಲೇಬೇಕು. ಅವರು ತಯಾರಿಸಿದ ತಿನಿಸಿಗೆ ಬಹಳ ಬೇಡಿಕೆ ಇತ್ತು. ನನ್ನ ಚಿಕ್ಕಿ ಪ್ರತಿದಿನ ಬೆಳಿಗ್ಗೆ ನಾಲ್ಕಕ್ಕೆ ಎದ್ದು ಕ್ಯಾಂಟೀನಿಗೆ ಬೇಕಾದ ಇಡ್ಲಿ, ಪಲಾವ್ ಇತ್ಯಾದಿ ತಿಂಡಿಗಳನ್ನು ತಯಾರಿಸಿಕೊಟ್ಟರೆ ಚಿಕ್ಕಪ್ಪ ತಮ್ಮ ಸ್ಕೂಟರ್ ನಲ್ಲಿ ಅದನ್ನು ಕ್ಯಾಂಟೀನ್ ಗೆ ಕೊಂಡೊಯ್ದು ಬೆಳಗಿನ ಮಾರಾಟ ಮುಗಿಸಿ ಹನ್ನೊಂದು ಗಂಟೆಯ ಸುಮಾರಿಗೆ ಮನೆಗೆ ಮರಳುತ್ತಿದ್ದರು. ಚಿಕ್ಕಿ ಮನೆಗೆಲಸ ಮುಗಿಸಿ ಸಂಜೆಯ ತಿಂಡಿಗೆ ತಯಾರಿ ಶುರುಮಾಡಿದರೆ ಚಿಕ್ಕಪ್ಪ ಪೇಟೆಗೆ ಹೋಗಿ ಸಾಮಾನು ಸರಂಜಾಮು ತರುತ್ತಿದ್ದರು. ಸಂಜೆಗೂ ಹಲವಾರು ರೀತಿಯ ಸ್ನ್ಯಾಕ್ಸ್ ತಯಾರಿಸಿ ನನ್ನ ಚಿಕ್ಕಿ ಕೊಟ್ಟಾಗ ಚಿಕ್ಕಪ್ಪ ಅದನ್ನು ಕ್ಯಾಂಟೀನ್ ನಲ್ಲಿ ಮಾರಾಟ ಮಾಡಿ ಸಂಜೆ ಏಳರ ಸುಮಾರಿಗೆ ಮನೆಗೆ ಮರಳುತ್ತಿದ್ದರು. ಆ ಸಮಯದಲ್ಲಿ ನನ್ನ ಚಿಕ್ಕಮ್ಮ ಅಲಂಕರಿಸಿಕೊಂಡು ಕೂತಿದ್ದು ಗಂಡ ಬಂದ ಕೂಡಲೇ ಇಬ್ಬರೂ ಹೊರ ತಿರುಗಾಟ ಮಾಡುತ್ತಿದ್ದರು. ಅವರಿಬ್ಬರನ್ನು ನೋಡಿದರೆ ಬೆಳಗ್ಗಿನಿಂದ ಸಂಜೆಯವರೆಗೆ ಬಿಗಿಯಾಗಿ ದುಡಿದು ದಣಿದವರು ಎಂದು ಅನಿಸುತ್ತಲೇ ಇರಲಿಲ್ಲ. 

ನಾವೆಲ್ಲ ಮೈಸೂರಿಗೆ ಹೋಗಿ ಅವರ ಮನೆಯಲ್ಲಿ ವಾರಗಟ್ಟಲೆ ಝಾಂಡಾ ಊರುತ್ತಿದ್ದೆವು. ಚಿಕ್ಕಮ್ಮನ ಕೈಯ್ಯಡುಗೆ ಉಣುವುದೆಂದರೆ ನಮಗೆಲ್ಲ ಇಷ್ಟ. ಬರೀ ನಮಗಲ್ಲ, ಮೈಸೂರಿನಲ್ಲಿ ಸ್ನಾತಕೋತ್ತರ ಪದವಿ ಮಾಡಿದ ನನ್ನೆಲ್ಲಾ ಕಸಿನ್ಸ್ ಅವರ ಮನೆಯ ಖಾಯಂ ಅತಿಥಿಗಳು!



ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆ ನಿಂತ ನನ್ನ ಚಿಕ್ಕಮ್ಮ - ಚಿಕ್ಕಪ್ಪ ನಿಜವಾದ ಅರ್ಥದಲ್ಲಿ ಅವರ ನಿವೃತ್ತ ಬದುಕನ್ನು ಬದುಕತೊಡಗಿದ್ದರು. ಅವರಿಬ್ಬರ ಒಡನಾಟ, ಬದುಕಿನ ಪ್ರೀತಿ ಎಲ್ಲರಿಗೂ ಮಾದರಿಯಾಗಿತ್ತು. ಅವರ ಮೂರೂ ಮಕ್ಕಳು ಸುಂದರವಾಗಿ ಬದುಕು ಕಟ್ಟಿಕೊಂಡಿರುವ ತೃಪ್ತಿ ಚಿಕ್ಕಿಗಿತ್ತು. ಬಹಳ ಸ್ವತಂತ್ರ ಮನೋಭಾವದ ನನ್ನ ಚಿಕ್ಕಿಗೆ ಸ್ವಚ್ಛತೆಯ ಗ್ರಸ್ತತೆ ಇತ್ತು. ಅವರಿಲ್ಲದಿದ್ದರೂ ಅವರ ನೆನಪುಗಳು ನಮ್ಮಲ್ಲಿ ಸದಾ ಹಸಿರಾಗಿರುತ್ತವೆ ಎಂಬುದಂತೂ ನಿಜ. 

Posted 19/12/2025




No comments:

Post a Comment