Saturday, August 8, 2026

NAIK DEEPCHAND - VISIT TO HONGIRANA

 Friday, August 7, 2026

Hongirana School of Excellence, Amatekoppa, Sagara

ವತ್ತು ನಮ್ಮ ಶಾಲೆಗೆ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಹಾಗೂ ಆಪರೇಷನ್ ಪರಾಕ್ರಮದ ವೇಳೆಯ ಬಾಂಬ್ ಸ್ಫೋಟದಲ್ಲಿ ಎರಡೂ ಕಾಲು ಹಾಗೂ ಒಂದು ಕೈಯನ್ನು ಕಳೆದುಕೊಂಡ ಹರ್ಯಾಣದ ಹಿಸಾರ್ ನ ಮಾಜಿ ಯೋಧ ನಾಯಕ್ ದೀಪ್ ಚಂದ್ ಅವರು ಬಂದಿದ್ದರು. ಅಂತಹ ಯೋಧರೊಡನೆಯ ಒಡನಾಟ ಸಿಗುವುದೇ ಅಪರೂಪದ ಅವಕಾಶ. ಸಾಗರದ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನನ್ನ ಸ್ನೇಹಿತರಾದ ಸರಸ್ವತಿ ನಾಗರಾಜ್ ಅವರ ಮೂಲಕ ದೀಪ್ ಚಂದ್ ಅವರನ್ನು ನಮ್ಮಲ್ಲಿಗೆ ಕರೆಸುವ ಅವಕಾಶ ಸಿಕ್ಕಿತು. ಶಿವಮೊಗ್ಗದಲ್ಲಿ ಮಲ್ನಾಡ್ ಓಪನ್ ಗ್ರೂಪ್ ನವರು ನಡೆಸುವ “ಗೀತ ಗಾಯನ" ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿರುವ ನಾಯಕ್ ದೀಪ್ ಚಂದ್ ನಮ್ಮ ಶಾಲೆಗೆ ಬಂದು ನಮ್ಮ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ್ದು ನಾವು ಬಯಸದೇ ಬಂದ ಭಾಗ್ಯ!


ಐವತ್ತೊಂದು ವರ್ಷದ ದೀಪ್ ಚಂದ್ ಅವರ ಜೀವನೋತ್ಸಾಹವನ್ನು ನೋಡಿ ನಾವು ಕಲಿಯಬೇಕಾದದ್ದು ಬಹಳಷ್ಟಿದೆ. ತನ್ನ ಇಪ್ಪತ್ತೇಳನೆಯ ವಯಸ್ಸಿನಲ್ಲಿ ಕೈ ಕಾಲುಗಳನ್ನು ಕಳೆದುಕೊಂಡು ಅಂಗವಿಹೀನರಾದ ದೀಪ್ ಚಂದ್ ಎಂದಿಗೂ ಧೃತಿಗೆಡದೆ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಅವರ ಪತ್ನಿ ಸುಶೀಲಾದೇವಿಯವರು ಪತಿಯ ಬೆಂಬಲಕ್ಕೆ ಕಂಕಣ ತೊಟ್ಟು ಸಾತ್ ನೀಡುತ್ತಿದ್ದಾರೆ. ಆ ದಂಪತಿಗಳ ಜೀವನ ಪ್ರೀತಿ ಹಾಗೂ ಪರಸ್ಪರ ಅರ್ಥೈಸಿಕೊಂಡು ನಡೆಸುತ್ತಿರುವ ಬದುಕು ನಮಗೆಲ್ಲಾ ಮಾದರಿಯಾದಂತಹುದು. " ಆದರ್ಶ ಸೈನಿಕ ಪ್ರತಿಷ್ಠಾನ” ಎನ್ನುವ ಸಂಸ್ಥೆ ಸ್ಥಾಪಿಸಿ ಹುತಾತ್ಮ ಸೈನಿಕರ ಕುಟುಂಬಕ್ಕೆ ಸಹಾಯ ಮಾಡುವ ಕೆಲಸವನ್ನು ದೀಪ್ ಚಂದ್ ಅವರು ಮಾಡುತ್ತಿದ್ದಾರೆ. ಅವರ ಬಳಿ ಇರುವ ಕಾರಿನ ಹೊರಮೈಯ್ಯಲ್ಲಿ ಕಾರ್ಗಿಲ್ ಯುದ್ದದ ಕಥಾನಕವನ್ನು ಬರೆಸಿದ್ದಾರೆ. ವಿವಿಧ ಸ್ಥಳಗಳಿಗೆ ಹೋಗಿ ತನ್ನ ಸ್ಫೂರ್ತಿದಾಯಕ ಮಾತುಗಳಿಂದ ಜನರಲ್ಲಿ ಉತ್ತಮ ಕೆಲಸ ಮಾಡಲು ಪ್ರೇರಣೆ ನೀಡುತ್ತಿದ್ದಾರೆ. ತನ್ನ ಅಂಗವೈಕಲ್ಯತೆಯ ಬಗ್ಗೆ ಯಾವತ್ತೂ ಯೋಚಿಸದೆ ಪ್ರತೀ ಕ್ಷಣವೂ ಸಮಾಜಕ್ಕೆ ತಾನೇನು ಕೊಡಬಲ್ಲೆ ಎಂಬ ಪ್ರಯತ್ನದಲ್ಲಿ ತೊಡಗಿಸಿಕೊಂಡಿರುವ ನಾಯಕ್ ದೀಪ್ ಚಂದ್ ಅಂತಹ ವ್ಯಕ್ತಿಗಳು ನಿತ್ಯ ಸ್ಮರಣೀಯರು.

ದೀಪ್ ಚಂದ್ ಅವರು ತನ್ನ ಬದುಕಿನ ಧ್ಯೇಯದ ಬಗ್ಗೆ, ಅದಕ್ಕಾಗಿ ಅವರ ಶ್ರಮದ ಬಗ್ಗೆ, ಕಾರ್ಗಿಲ್ ಯುದ್ಧದಲ್ಲಿನ ತನ್ನ ರೆಜಿಮೆಂಟ್ ನ ಹೋರಾಟದ ಬಗ್ಗೆ, ಸೈನಿಕರು ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಸ್ಪಂದಿಸಿ ಸಹಕರಿಸುವ ಬಗ್ಗೆ, ಯುದ್ಧದ ಆಪತ್ಕಾರಿ ಸಂದರ್ಭದಲ್ಲೂ ಧೈರ್ಯಗುಂದದೆ ಹೋರಾಡುವ ಸೈನಿಕರ ಮಾನಸಿಕ ಕ್ಷಮತೆಯ ಬಗ್ಗೆ ….. ಸುಮಾರು ಅರ್ಧ ತಾಸಿಗೂ ಮೀರಿ ಹಿಂದಿಯಲ್ಲಿ ಮಾತನಾಡಿದರು. ಅಲ್ಲಿದ್ದ ಸಣ್ಣ ಮಕ್ಕಳಿಗೆ ಅವರ ಮಾತು ಸಂಪೂರ್ಣವಾಗಿ ಅರ್ಥವಾಗದಿದ್ದರೂ ಎಲ್ಲಾ ಮಕ್ಕಳು ಕಮಕ್ ಕಿಮಕ್ ಎನ್ನದೆ ಕೂತಿದ್ದರು. ಅವರ ಮಾತಿನ ನಂತರದಲ್ಲಿ ಪ್ರಶ್ನೋತ್ತರ ಕಾರ್ಯಕ್ರಮವಿದ್ದು ನಮ್ಮ ಮಕ್ಕಳು ಬಹಳ ಅರ್ಥಪೂರ್ಣ ಪ್ರಶ್ನೆಗಳನ್ನು ಕೇಳಿದರು. ಒಬ್ಬ ಯೋಧನ ಮೌಲ್ಯ ಎಂತಹುದು ಎನ್ನುವುದು ಇಂದಿನ ಕಾರ್ಯಕ್ರಮದಲ್ಲಿ ಮಕ್ಕಳ ವರ್ತನೆ ನೋಡಿ ಅರಿವಾಯಿತು. ಇಂತಹ ಒಬ್ಬೊಬ್ಬ ಯೋಧರ ಭೇಟಿ ಎನ್ನುವುದು ನಮ್ಮೆಲ್ಲರಲ್ಲಿ ದೇಶಪ್ರೇಮವನ್ನು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ ಎಂದು ನಾನು ನಿಸ್ಸಂಶಯವಾಗಿ ಹೇಳಬಲ್ಲೆ..

ಇಂದಿನ ದಿನ ನಮ್ಮೆಲ್ಲರ ಮನದಲ್ಲಿ ಅಚ್ಚಳಿಯದೆ ಉಳಿಯುವಂತಹ ದಿನವಲ್ಲವೆ? 

Posted 8/8/2026


No comments:

Post a Comment