17/6/2024
ಪರಿಸರದ ಅನುಭವ
ನಾನು ಪಿಯುಸಿ ವಿದ್ಯಾಭ್ಯಾಸವನ್ನು ಮಾಡಿದ್ದು ಬ್ರಹ್ಮಾವರದಲ್ಲಿ. ಸಾಲಿಕೇರಿಯ ಅಜ್ಜಯ್ಯನ ಮನೆಯಲ್ಲಿ ನನ್ನ ವಾಸ. ಅಜ್ಜಯ್ಯ, ನನ್ನ ಸೋದರತ್ತೆಯರು, ಅವರ ಮಕ್ಕಳು, ನನ್ನ ಅಣ್ಣನೊಡನೆ ನಾನೂ ಅಲ್ಲಿ ಇದ್ದೆ. ಮನೆಯಿಂದ ಕಾಲೇಜಿಗೆ ಗದ್ದೆಯ ಏರಿಯಲ್ಲಿ ಮೂರು ಕಿಮೀ ನಡೆದುಕೊಂಡು ಹೋಗಬೇಕಿತ್ತು. ಆಗ ನನ್ನ ಒಡನಾಡಿಯಾಗಿದ್ದವಳು ಜ್ಯೂಲಿ. ಅವಳು ಅಲ್ಲಿಯೇ ಸುಮಾರು ಒಂದು ಕಿಮೀ ದೂರದಲ್ಲಿದ್ದ ಕಾಸಾನಹಿತ್ತಲಿನವಳು. ನಮ್ಮೂರಿನ ಹೆಚ್ಚಿನ ಕ್ರಿಶ್ಚಿಯನ್ ಸಮುದಾಯದವರು ಅಲ್ಲಿಯೇ ವಾಸವಾಗಿದ್ದರು.
ನನ್ನ ಹಾಗೂ ಜ್ಯೂಲಿಯ ದೋಸ್ತಿ ಹೆಚ್ಚುತ್ತಿದ್ದಂತೆ ನಾನವಳ ಮನೆಗೆ ಹೋಗಲಾರಂಭಿಸಿದೆ. ಅಲ್ಲಿನ ವಿಭಿನ್ನ ಬದುಕಿನ ರೀತಿಯನ್ನು ಗಮನಿಸಲಾರಂಭಿಸಿದೆ. ಮೊದಮೊದಲಿಗೆ ಅಲ್ಲಿ ಸುತ್ತ ಮುತ್ತಲಿನ ಮೀನಿನ ವಾಸನೆಗೆ ಹೊಂದಿಕೊಳ್ಳಲು ಕಷ್ಟವಾಯಿತು. ನಂತರದಲ್ಲಿ ಅದು ಸಹ್ಯವಾಯಿತು. ಅವಳ ಅಮ್ಮ ಮೀನು ಕತ್ತರಿಸಿ ಕ್ಲೀನ್ ಮಾಡುವಾಗ ಕುತೂಹಲದಿಂದ ನೋಡುತ್ತಾ ಅವರ ಮುಂದೆ ಕುಳಿತಿರುತ್ತಿದ್ದೆ. ಒಂದು ದಬರಿಯಲ್ಲಿ ನೀರು ತುಂಬಿಸಿಕೊಂಡು ಮನೆಯ ಹೊರಗೆ ಮೆಟ್ಟುಕತ್ತಿಯ ಮೇಲೆ ಅವರು ಕುಳಿತು ಮೊದಲು ಮೀನಿನ ಬೆನ್ನಿನ ರೆಕ್ಕೆಗಳನ್ನು ಕತ್ತರಿಸಿ ನಂತರದಲ್ಲಿ ಎರಡೂ ಕೈಗಳಲ್ಲಿ ಮೀನನ್ನು ಹಿಡಿದು ಅದನ್ನು ಮೆಟ್ಟುಕತ್ತಿಯ ಮೇಲೆ ಆಚೀಚೆ ಚಲಿಸಿ ಅದರ ಮೈಗೆ ಅಂಟಿದಂತಿರುವ ಕಿವಿರನ್ನು ಕೀಳುತ್ತಿದ್ದರು. ಅದರ ನಂತರ ಅದರ ಬಾಯಿಯಿಂದ ಕೆಳಹೊಟ್ಟೆಯ ತನಕ ಸೀಳಿ ಕೈ ಬೆರಳುಗಳಿಂದ ಅದರ ಕರುಳನ್ನು ಹೊರ ತೆಗೆದು ಎಸೆದು ಗುದದ ರೆಕ್ಕೆಯನ್ನು ಕತ್ತರಿಸಿ ಆ ಮೀನನ್ನು ನೀರಿನಲ್ಲಿ ಚೆನ್ನಾಗಿ ತೊಳೆಯುತ್ತಿದ್ದರು. ಇದಿಡೀ ಪ್ರಕ್ರಿಯೆಯನ್ನು ನಾನು ಬಾಯಿಬಿಟ್ಟು ನೋಡುತ್ತಾ ಕುಳಿತಿರುತ್ತಿದ್ದೆ. ನಂತರದಲ್ಲಿ ಅವರು ಅದರಿಂದ ಮಾಡುವ ಅಡುಗೆಯ ವಿಧಾನ ಬೇರೆ ಬಿಡಿ!
ಇವತ್ತು ಕಾರವಾರದ ಹೋಟೆಲೊಂದರ ಹೊರಗೆ ಹೆಂಗಸರಿಬ್ಬರು ಮೀನನ್ನು ಕ್ಲೀನ್ ಮಾಡುತ್ತಿದ್ದುದನ್ನು ನೋಡಿದಾಗ ನನಗೆ ಹಳೆಯ ನೆನಪುಗಳು ಒಮ್ಮೆಲೇ ಮರುಕಳಿಸಿದವು. ಒಮ್ಮೆ ಊರಿಗೆ ಹೋಗಿ ಬಂದಂತಾಯಿತು!
ಆ ದಿನಗಳೇ ಚೆನ್ನ. ಮುಗ್ಧ ಮನಸ್ಸಿನಿಂದ ಎಲ್ಲವಕ್ಕೂ ತೆರೆದುಕೊಳ್ಳುತ್ತಾ, ತಿಳಿದುಕೊಳ್ಳುತ್ತಾ ಇನ್ನೊಬ್ಬರ ಜೀವನ ವಿಧಾನವನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ಒಪ್ಪಿಕೊಳ್ಳುತ್ತಾ ಬದುಕಿದ ಪರಿಯನ್ನು ನೆನಸಿಕೊಂಡರೆ ಮನಸ್ಸಿಗೆ ಹಿತವೆನಿಸುತ್ತದೆ. ಆಹಾರ, ಇರಸರಿಕೆ ಎಲ್ಲವೂ ಅವರವರು ಬೆಳೆದು ಬಂದ ಪರಿಸರ ಹಾಗೂ ಜೀವನಕ್ರಮವನ್ನು ಆಧರಿಸಿರುತ್ತದೆ ಎಂಬಂಶವನ್ನು ಅರ್ಥೈಸಿಕೊಂಡು ಅದನ್ನು ಗೌರವಭಾವದಿಂದ ಸ್ವೀಕರಿಸಿದರೆ ಬದುಕು ಎಷ್ಟೊಂದು ಸರಳ - ಸುಂದರವಾಗಿರುತ್ತದೆಯಲ್ಲವೆ??
Posted 18/6/2024
No comments:
Post a Comment