Saturday, June 29, 2024

VENU KELAMANE - SHRADDHANJALI

 VENU KELAMANE - SHRADDHANJALI 


ವೇಣು ಕೆಳಮನೆಯ ಹಿರಿಯ ಮೊಮ್ಮಗ. ನಾನು ಮದುವೆಯಾಗಿ ಕೆಳಮನೆಗೆ ಬಂದಾಗ ಅವನಿಗೆ ಹತ್ತು ವರ್ಷದ ಪ್ರಾಯ. ಬಹಳ ಮುದ್ದಾಗಿದ್ದ ಹುಡುಗ. ಮಗುವಾಗಿದ್ದಾಗಂತೂ ಅವನು ಅತ್ಯಂತ ಸುಂದರವಾಗಿದ್ದ; ನಂತರವೂ ಕೂಡಾ. ಚೆಂದದ ಮುಖ ಲಕ್ಷಣ ಹೊಂದಿದವನಾಗಿದ್ದ.

ಮಲೆನಾಡಿನ ಮನೆಗಳ ಅತೀ ಮುದ್ದಿನ ವಾತಾವರಣದ ಅರಿವಿರದಿದ್ದ ನನಗೆ, ಅದರಲ್ಲೂ ಶಿಕ್ಷಕ ವೃತ್ತಿಯಲ್ಲಿದ್ದು ಮಕ್ಕಳನ್ನು ನೋಡುವ ದೃಷ್ಟಿಕೋನವೇ ಬೇರೆ ಇದ್ದ ನನಗೆ, ಮನೆಯವರ ಅತಿ ಮುದ್ದಿನಲ್ಲಿ ಮುಳುಗೇಳುತ್ತಿದ್ದ ನಮ್ಮ ಮನೆಯ ಮಕ್ಕಳನ್ನು ನೋಡಿದಾಗ ಆಶ್ಚರ್ಯವಾಗುತ್ತಿತ್ತು. ಅದೂ ಶಾಲೆಗೆ ಹೋಗಲು ಹಿಂದುಮುಂದು ನೋಡುವ ಮಕ್ಕಳನ್ನು ಕಂಡಾಗ ನನ್ನೊಳಗಿನ ‘ಶಿಕ್ಷಕಿ’ ಜಾಗೃತಳಾಗುತ್ತಿದ್ದಳು. ಇಷ್ಟೆಲ್ಲಾ ಏಕೆ ಹೇಳುತ್ತಿದ್ದೇನೆಂದರೆ ಆಗ ಹತ್ತು ವರ್ಷದವನಾಗಿದ್ದ ವೇಣು ಶಾಲೆಗೆ ಹೋಗಲು ಕೇಳುತ್ತಲೇ ಇರಲಿಲ್ಲ. ನಾನು ರಜೆಯಲ್ಲಿ ಮನೆಯಲ್ಲಿ ಇದ್ದಾಗಲೆಲ್ಲಾ ಅವನಿಗೆ ಹೆದರಿಸಿ ಅವನು ಶಾಲೆಗೆ ಹೋಗುವಂತೆ ಮಾಡುತ್ತಿದ್ದೆ. ಅವನಿಗೆ ನಾನು ‘ಚಿಕ್ಕಮ್ಮ’ನಾಗಿ ಇದ್ದದ್ದಕ್ಕಿಂತ ಶಾಲೆಗೆ ಹೋಗುವಂತೆ ಹೆದರಿಸುವ ಶಿಕ್ಷಕಿಯಾಗಿಯೇ ಇದ್ದೆನೇನೊ ಎಂದು ಈಗ ಅನಿಸುತ್ತದೆ!

ಚಿಕ್ಕಂದಿನಲ್ಲಿಯೇ ಯಕ್ಷಗಾನದ ಗುಂಗು ಹಿಡಿಸಿಕೊಂಡಿದ್ದ ವೇಣು ಅದ್ಭುತ ಕಂಠವನ್ನು ಹೊಂದಿದ ಭಾಗವತನಾಗಿ ಬೆಳೆದಿದ್ದು ನಂತರದ ಕಥೆ. ಈಗ್ಗೆ ಎರಡು ವರ್ಷಗಳ ಹಿಂದೆ ಅಪರೂಪಕ್ಕೆ ನಮ್ಮ ಮನೆಗೆ ಬಂದಿದ್ದ ವೇಣು ಸುಮಾರು ಒಂದು ಗಂಟೆಯ ಕಾಲ ಕಾಳಿಂಗ ನಾವಡರ ಬಗ್ಗೆ, ನನ್ನ ಅಣ್ಣನಾದ ಶ್ರೀಕಾಂತನ ಸಂಗೀತ ಜ್ಞಾನದ ಬಗ್ಗೆ ಹಾಗೂ ಪ್ರಚಲಿತದಲ್ಲಿದ್ದ ಕೆಲವರ ಭಾಗವತಿಕೆಯ ಬಗ್ಗೆ ಮಾತನಾಡಿದ್ದ; ಹಾಡಿದ್ದ. ಹಲವು ರಾಗಗಳಲ್ಲಿ ಕೆಲವು ಪದಗಳನ್ನು ಹಾಡಿ ಅವುಗಳ ಭಾವ ವ್ಯತ್ಯಾಸವನ್ನು ತಿಳಿಸಿದ್ದ. ಯಕ್ಷಗಾನ ತನ್ನ ಪರಿಶುದ್ಧತೆಯನ್ನು ಕಳೆದುಕೊಂಡು ಕಲಬೆರಕೆಯ ವಸ್ತುವಾಗುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ. ಪ್ರಾಯಶಃ ನನ್ನ ಮೂವತ್ತಮೂರು ವರುಷಗಳ ಒಡನಾಟದಲ್ಲಿ ಅವನು ನನ್ನೊಡನೆ ಅಷ್ಟೊಂದು ಮಾತನಾಡಿದ್ದು ಅದೇ ಮೊದಲನೆಯ ಸಲವಾಗಿತ್ತು ಹಾಗೂ ಕೊನೆಯ ಸಲವಾಗಿತ್ತು ಕೂಡಾ. ಅವನ ಮುಕ್ತ ಕಂಠದ ಕೆಲವು ಹಾಡುಗಳನ್ನು ಅಂದು ಹತ್ತಿರದಿಂದ ಕೇಳಿದಾಗ ಅವನ ಪ್ರತಿಭೆಯ ಬಗ್ಗೆ ಹೆಮ್ಮೆ ಎನಿಸಿ ಅವನ ಹಾಡುಗಳನ್ನು ಆಸ್ವಾದಿಸಿದ್ದೆ.

ಮೊನ್ನೆ ಜೂನ್ 25ರಂದು ರಸ್ತೆ ಅಪಘಾತದಲ್ಲಿ ಅವನು ಮರಣವನ್ನಪ್ಪಿದಾಗ ನಮಗೆಲ್ಲಾ ಆಘಾತವಾದದ್ದು ನಿಜ! ಯಕ್ಷಗಾನ ರಂಗ ಹೇಗೆ ಒಬ್ಬ ಉತ್ತಮ ಕಲಾವಿದನನ್ನು ಕಳೆದುಕೊಂಡಿತೋ ಹಾಗೆಯೇ ನಾವೆಲ್ಲಾ ಹಿರಿಯರ ಸಮ್ಮುಖದಲ್ಲಿ ನಮ್ಮ ಮನೆ ತನ್ನ ಹಿರಿಯ ಮೊಮ್ಮಗನನ್ನು ಕಳೆದುಕೊಂಡಿತು. ಇನ್ನೂ ನಲವತ್ಮೂರು ವರ್ಷ ಸಾಯುವ ವಯಸ್ಸಲ್ಲ. ಆದರೆ ವಿಧಿ ಬರಹ! ವೇಣುವಿನ ಆತ್ಮಕ್ಕೆ ಸದ್ಗತಿ ಕೋರುತ್ತಾ ಈ ಬರಹವನ್ನು ಅವನಿಗೆ ಅರ್ಪಿಸುತ್ತಿದ್ದೇನೆ......... Shobha Somayaji

Shraddhanjali From Vinayaka Kelamane......

ನನ್ನಣ್ಣ-

ನಾನು ಒಂದನೇ ತರಗತಿಯಲ್ಲಿದ್ದಾಗ ನಾಲ್ಕನೇ ತರಗತಿಯ ಹುಡುಗ ನನ್ನನ್ನ ದೂಡಿ ಕೆಡಗಿದಾಗ ಆಕಾಶ ಭೂಮಿ ಒಂದು ಮಾಡಿ ಆತನ ಗ್ರಹಚಾರ ಬಿಡಿಸಿದ ನನ್ನಣ್ಣ
ಮಲೆನಾಡಿನ ಮಳೆ,ಆಲೆಮನೆ, ಹಬ್ಬಹಾಡುವುದು ಎಲ್ಲವನ್ನೂ ಅನುಭವಿಸಲು ಕಲಿಸಿದ ನನ್ನಣ್ಣ
ಮೇಲು-ಕೀಳು, ಬ್ರಾಹ್ಮಣ-ಶೂದ್ರ, ಜಾಣ- ದಡ್ಡ ಎಲ್ಲರನ್ನೂ ಸಮಾನವಾಗಿ ನೋಡಲು ಕಲಿಸಿದ ನನ್ನಣ್ಣ
*ಯಕ್ಷಗಾನ ಭಾಗವತಿಕೆಯಲ್ಲಿ ಯಾವ ವಿಭಾಗದಲ್ಲೂ ರಾಜಿಯಾಗದ ನನ್ನಣ್ಣ*
*ಹೊಸ ಪ್ರಸಂಗ, ಯಕ್ಷಗಾನಕ್ಕೆ ಒಪ್ಪದ ರಾಗಗಳನ್ನು ಯಾವತ್ತೂ ಒಪ್ಪದ ನನ್ನಣ್ಣ*
ಯಕ್ಷರಂಗಕ್ಕೆ ಬಂದು ಇಪ್ಪತ್ತೆರಡು ವರ್ಷಗಳಾದರೂ ಪ್ರಚಾರ, ಪ್ರಚಾರಕ್ಕಾಗಿ ಯಾವುದೇ ಗಿಮಿಕ್ ಬಳಸದ ನನ್ನಣ್ಣ
ಮಕ್ಕಳಲ್ಲಿ ಮಕ್ಕಳಂತೆ ಬದುಕಿದ ನನ್ನಣ್ಣ,
ಭಾಗವತಿಕೆಯ ಸಂಗೀತಗಾರನಿಂದ ಮುಖ್ಯ ಭಾಗವತನಾಗುವ ಹಂತದವರೆಗೂ ಕ್ರಮವಾಗಿ ಹಂತ ಹಂತವಾಗಿ ಬೆಳದ ನನ್ನಣ್ಣ,
ನನ್ನ ಮಕ್ಕಳಲ್ಲೂ ನನ್ನನ್ನೇ ಕಾಣುತ್ತಿದ್ದ ನನ್ನಣ್ಣ
ನಿನಗಿದೋ ನನ್ನ ಅಶ್ರು ತರ್ಪಣ

Medini Kelamane wrote.......


ನನಗೆ ಯಕ್ಷಗಾನ ಅಂದರೆ ಮೊದಲಿನಿಂದಲೂ ಅಷ್ಟು ಇಷ್ಟ ಅಲ್ಲ. ಯಕ್ಷಗಾನದ ಕುಟುಂಬವಾದರೂ ಸರಿಯಾಗಿ ಒಂದೂ ಪ್ರಸಂಗ ಪೂರ್ತಿ ನೋಡಿಲ್ಲ. ಪದ್ಯ, ಮದ್ದಳೆ ಶುರು ಆಯಿತೆಂದರೆ ಅದನ್ನು ಆಸ್ವಾದಿಸೋಕೆ ಆಗಲ್ಲ. ಅದಕ್ಕೇ ವೇಣು ಅಣ್ಣ ನ ಜೊತೆ ಒಡನಾಟ ಕಡಿಮೆ. ಯಾಕೆಂದರೆ ಅವನು ಯಾವಾಗಲೂ ಮಾತಾಡುತ್ತಿದ್ದುದೇ ಯಕ್ಷಗಾನದ ಬಗ್ಗೆ.

ಆದರೆ ಒಂದು ದಿನ ಯಾವತ್ತೋ ಮನೆಯಲ್ಲಿ ಹಾಡುತ್ತಿದ್ದ. ಹತ್ತಿರದಿಂದ ನೋಡಿದ್ದೆ. ಬಿಳಿ ಪಂಚೆ ಉಟ್ಟಿದ್ದ. ನೇರವಾಗಿ ಸೆಟೆದು ಕೂತಿದ್ದ. ಒಂದು ಚೂರೂ ಬೊಜ್ಜು ಇಲ್ಲದ ದೇಹ ಬಾಣದಂತೆ ಕಾಣುತಿತ್ತು. ಹುಬ್ಬು ಗಂಟಿಕ್ಕಿ ಎದುರಿಗೆ ದೃಷ್ಟಿ ನೆಟ್ಟಿದ್ದ. ಗಂಟಲಿನ ನರಗಳು ಎದ್ದಿದ್ದವು. ಅವತ್ತು ಅವನ ಮೇಲೆ ಏನೋ ವಿಚಿತ್ರವಾದ ಅಭಿಮಾನ ಉಕ್ಕಿ ಬಂದಿತ್ತು. ಆಮೇಲೆ ಅವನು ಪದ್ಯ ಹೇಳುವಾಗೆಲ್ಲಾ ಅದು ನನ್ನನ್ನು ಸೆಳೆಯುತ್ತಿತ್ತು. ಕಂಚಿನ ಕಂಠ ಹೇಗಿರುತ್ತದೆ ಎಂದು ಅವನಿಂದಲೇ ತಿಳಿದದ್ದು.
ನಮ್ಮ ಕುಟುಂಬದಲ್ಲಿ ಯಾರ ಜೊತೆಯಲ್ಲೂ ಅವನು ಅಷ್ಟು ಸಲಿಗೆಯಿಂದ ಮಾತನಾಡದಿದ್ದರೂ ನಮ್ಮೆಲ್ಲರಿಗಿಂತ ಜಾಸ್ತಿ ಅವನಿಗೆ ಎಲ್ಲರ ಜೊತೆ connection ಗಟ್ಟಿ ಇದೆ ಅನಿಸುತಿತ್ತು. ಇನ್ನೊಬ್ಬರಿಂದ expect ಮಾಡುವ ಮೆಚ್ಚುಗೆಯ validation ಮೀರಿ ನಿಂತಿದ್ದ. ಸ್ವಾಭಿಮಾನಿ. ಜಗಳಗಂಟ. ಇನ್ನೂ ಏನೇನೋ. ಅವನ character ಇಟ್ಟುಕೊಂಡು ಒಂದು ಸಿನಿಮಾ ಮಾಡಬೇಕು ಅಂದುಕೊಳ್ಳುತ್ತಿದ್ದೆ. ನಾವು 9 ಜನ ಅಣ್ಣ ತಮ್ಮ ತಂಗಿಯರಲ್ಲಿ ಮೊದಲನೆಯವ. ಪ್ರೀತಿ, ಬೈಗುಳ ಎರಡನ್ನೂ ಸಮನಾಗಿ ಪಡೆದವ. ಅವ ಇನ್ನಿಲ್ಲ.
ನಾನು ದೆಹಲಿಯಲ್ಲಿದ್ದಾಗ, ಯಕ್ಷಗಾನ ನಿಮಿತ್ತ ಬಂದವ ಅಲ್ಲಿ ನನ್ನ ಮನೆಗೆ ಬಂದಿದ್ದ. ಬೀಟ್ರೂಟ್ ಸಾಂಬಾರ್ ಮಾಡಿದ್ದೆ. ಚೆನ್ನಾಗಿ ಮಾಡಿದ್ದೆ ಅಂತ ಮನೆಗೆ ಬಂದು ಹೇಳಿದ್ದನಂತೆ.

Posted 30/6/2024

No comments:

Post a Comment