Monday, October 16, 2023

ನವರಾತ್ರಿಯ ಎರಡನೇ ದಿನ ( 2023 )- ಬ್ರಹ್ಮಚಾರಿಣಿ ದೇವಿ

 ಸೋಮವಾರ , 16/10/2023




ಬ್ರಹ್ಮಚಾರಿಣಿ- ಹ್ರೀಂ ಶ್ರೀ ಅಂಬಿಕಾಯೈ ನಮಃ

 ಬ್ರಹ್ಮಚಾರಿಣಿ

ದಧಾನಾ ಕರ ಪದ್ಮಾಭ್ಯಾಂ ಅಕ್ಷಮಾಲಾ ಕಮಾಂಡಲು

ದೇವೀ ಪ್ರಸೀದತು ಮಯೀ ಬ್ರಹ್ಮಚಾರಿಣ್ಯನುತ್ತಮಾ||

 ಬ್ರಹ್ಮಚಾರಿಣಿ: ಬ್ರಹ್ಮ ಎಂದರೆ ತಪಸ್ಸು. ಬ್ರಹ್ಮಚಾರಿಣಿ ಎಂದರೆ ತಪಸ್ಸನ್ನು ಆಚರಿಸುವವಳು ಎಂದರ್ಥ. ಇವಳ ಬಲಕೈಯಲ್ಲಿ ಜಪಮಾಲೆ ಮತ್ತು ಎಡಕೈಯಲ್ಲಿ ಕಮಂಡಲ ಇರುತ್ತದೆ.
ದೇವಿ ಪಾರ್ವತಿಯು ಶಿವನನ್ನು ಪತಿಯಾಗಿ ಪಡೆದುಕೊಳ್ಳಲು ಬಹಳ ಕಠಿಣವಾದ ತಪಸ್ಸನ್ನು ಮಾಡಿದಳು. ಇಂತಹ ಕಠಿಣ ತಪಸ್ಸಿನ ಕಾರಣ ಇವಳನ್ನು ಬ್ರಹ್ಮಚಾರಿಣಿ ಎಂದು ಕರೆಯಲಾಯಿತು. ಬ್ರಹ್ಮಚಾರಿಣಿಯ ಉಪಾಸನೆಯಿಂದ ಮನುಷ್ಯರಲ್ಲಿ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ಇವುಗಳ ವೃದ್ಧಿ ಆಗುತ್ತದೆ. ಜೀವನದ ಕಠಿಣ ಸಂದರ್ಭದಲ್ಲಿಯೂ ಅವನ ಮನಸ್ಸು ಕರ್ತವ್ಯ ಪಥದಿಂದ ವಿಚಲಿತವಾಗುವುದಿಲ್ಲ. ನವರಾತ್ರಿಯ ಎರಡನೆಯ ದಿನ ಇವಳ ಪೂಜೆಯಿಂದ ಸಾಧಕನ ಮನಸ್ಸು ಸ್ವಾಧಿಷ್ಠಾನ ಚಕ್ರದಲ್ಲಿ ಸ್ಥಿತವಾಗುತ್ತದೆ. ಅಂದಿನ ಗ್ರಹ - ಕುಜ, ನೈವೇದ್ಯ - ಮೊಸರನ್ನ.
ದಕ್ಷ ಮಹಾರಾಜನ ಮಗಳು ಸತಿದೇವಿಯು ಯಜ್ಞಕುಂಡದ ಅಗ್ನಿಗೆ ಆಹುತಿಯಾದ ನಂತರ, ರಾಜನಾದ ಹಿಮಪರ್ವತನ ಮಗಳಾಗಿ ಪಾರ್ವತಿಯಾಗಿ ಜನಿಸುವಳು. ಇವಳನ್ನು "ಹೇಮವತಿ" ಎಂದೂ ಕೂಡಾ ಕರೆಯಲಾಗುತ್ತದೆ. ಪಾರ್ವತಿ ದೇವಿಯು ಮಹಾಶಿವನನ್ನು ವಿವಾಹವಾಗಲು ನಿರ್ಧರಿಸುವಳು. ಇವಳ ಈ ನಿರ್ಧಾರವನ್ನು ಇವಳ ಹೆತ್ತವರು ನಿರಾಕರಿಸಿ ಅವಳ ಬಯಕೆಯನ್ನು ನಿರುತ್ಸಾಹಗೊಳಿಸುವರು. ಇದರಿಂದ ಕಂಗಲಾದ ಇವಳು ನಾರದರ ಸೂಚನೆಯಂತೆ ಮಹಾರುದ್ರನನ್ನು ಒಲಿಸುವ ಸಲುವಾಗಿ ಸುಮಾರು 5000 ವರ್ಷಗಳ ಕಾಲ ಘೋರವಾದ ತಪಸ್ಸನ್ನು ಆಚರಿಸುವಳು. ಈ ಕಠಿಣವೆನಿಸಿದ ತಪ್ಪಸ್ಸಿನಿಂದ ಇವಳಿಗೆ "ತಪಶ್ಚಾರಿಣೀ" ಎಂಬ ಹೆಸರು ಬಂದಿತು. ತಪಶ್ಚಾರಿಣೀ ಎಂಬ ಪದಕ್ಕೆ ಅರ್ಥಾತ್ "ಬ್ರಹ್ಮಚಾರಿಣಿ" ಎಂಬ ಹೆಸರು ಇದೆ. ಇವಳು ಘೋರವಾದ ತಪಸ್ಸನ್ನು ಆಚರಿಸುವ ಸಮಯದಿ ಕೇವಲ ಹೂವು, ಹಣ್ಣು ಮತ್ತು ಎಲೆಗಳನ್ನು ಆಹಾರವಾಗಿ ಸೇವಿಸುತ್ತಿದ್ದಳು. ಎಲೆಯನ್ನು ಸಂಸ್ಕೃತ ಭಾಷೆಯಲ್ಲಿ "ಪರ್ಣ"ವೆಂದು ಕರೆಯಲಾಗುತ್ತದೆ. ಆದ್ದರಿಂದ ಬ್ರಹ್ಮಚಾರಿಣಿ ದೇವಿಯನ್ನು "ಅರ್ಪಣಾ" ಎಂದು ಕರೆಯುತ್ತೇವೆ. 


16/10/2023

No comments:

Post a Comment