Saturday, October 14, 2023

ನವರಾತ್ರಿಯ ಮೊದಲನೇ ದಿನ ( 2023) - ಶೈಲ ಪುತ್ರಿ ದೇವಿ

 ಭಾನುವಾರ 15 ಅಕ್ಟೋಬರ್, 2023 

ನವರಾತ್ರಿಯ ಮೊದಲ ದಿನ :- 


 "ಶೈಲ ಪುತ್ರಿಯ ದೇವಿ ಆರಾಧನೆ :-" 




ನವರಾತ್ರಿಯ ಮೊದಲ ದಿನದಂದು ದುರ್ಗಾದೇವಿಯ ಅವತಾರವೆನಿಸಿದ ಶೈಲಪುತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ಆಶ್ವಯುಜ ಮಾಸದ ಶುಕ್ಲ ಪಾಡ್ಯಮಿಯಿಂದ ದಶಮಿಯವರೆಗೂ ಒಂಭತ್ತು ದಿನಗಳ ಕಾಲ ಆಚರಿಸಲ್ಪಡುವ ಹಬ್ಬವನ್ನು ನವರಾತ್ರಿ ಹಬ್ಬವೆಂದು ಆಚರಿಸಲಾಗುತ್ತದೆ. ನವರಾತ್ರಿಯಂದು ದುರ್ಗಾದೇವಿಯನ್ನು ನವ ಅವತಾರಗಳಲ್ಲಿ ಪೂಜಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದ್ದು ಈ ಒಂಬತ್ತು ದಿನಗಳಲ್ಲಿ ಶ್ವೇತ ವಸ್ತ್ರದಲ್ಲಿನ ಶಕ್ತಿ ಅವತಾರವೆನಿಸಿದ ಶೈಲಪುತ್ರಿ ದೇವಿಯನ್ನು ಮೊದಲ ದಿನ ಪೂಜಿಸಲಾಗುತ್ತದೆ. ಶೈಲಪುತ್ರಿಯ ಆರಾಧನೆಯಿಂದ ನಮ್ಮಲ್ಲಿ ಶಾಂತಿಯುತವಾದ ನಡವಳಿಕೆಯನ್ನು ಬೆಳೆಸಿಕೊಳ್ಳಲು ಪ್ರೇರಣೆ ನೀಡುವಳೆಂಬ ನಂಬಿಕೆ ಇದೆ. ಶೈಲ ಎಂದರೆ ಸಂಸ್ಕೃತ ಭಾಷೆಯಲ್ಲಿ ಪರ್ವತವೆಂಬ ಅರ್ಥವಿದೆ. ಈಕೆಯು ಪರ್ವತರಾಜನ ಮಗಳಾಗಿದ್ದು, ಇಲ್ಲಿ ಪರ್ವತ ಎಂದರೆ ಪ್ರಕೃತಿ. ಹಾಗಾಗಿ ಶೈಲಪುತ್ರಿ ದೇವಿಯಲ್ಲಿ ಪ್ರಕೃತಿಯ ಗುಣವಿದ್ದು, ಇವಳ ಆರಾಧನೆಯು ನಮಗೆ ಸ್ತ್ರೀಯರ ಮೇಲಿನ ಮಮತಾ ಗುಣ ಬೆಳೆಸಲು, ಪ್ರಕೃತಿ ಮಾತೆಯನ್ನು ಪ್ರೀತಿಸುವುದರ ಜೊತೆಗೆ ಪೂಜಿಸುವ ಮನೋಭಾವನೆ ಬೆಳೆಸಿಕೊಳ್ಳಲು ಮತ್ತು ನಮ್ಮ ಮನಸ್ಸನ್ನು ಶುದ್ಧವಾಗಿರಿಸಿಕೊಳ್ಳಲು ಪ್ರೇರಣೆ ನೀಡುವಳು.


ಶೈಲಪುತ್ರಿಯು ಪರ್ವತರಾಜ ಹಿಮವಂತನ ಪುತ್ರಿಯಾಗಿದ್ದು ಇವಳ ದೇವಿಯ ಅವತಾರದ ಹಿಂದೆ ಒಂದು ಪೌರಾಣಿಕ ಕಥೆ ಇದೆ. ಪ್ರಜಾಪತಿ ಬ್ರಹ್ಮನ ಮಗನಾದ ದಕ್ಷ ತನ್ನ 27 ಪುತ್ರಿಯರನ್ನು ಚಂದ್ರನಿಗೆ ಮದುವೆ ಮಾಡಿ ಕೊಟ್ಟಿದ್ದನು. ಉಳಿದವರಲ್ಲಿ ಒಬ್ಬಳಾದ ದಾಕ್ಷಾಯಿಣಿಯು ಮಹಾಶಿವನನ್ನು ಪ್ರೇಮಿಸಿ ವಿವಾಹವಾಗುವಳು. ಆದರೆ, ದಕ್ಷ ಮಹಾರಾಜನಿಗೆ ಮಹಾಶಿವನನ್ನು ಕಂಡರೆ ಅಷ್ಟೇನೂ ಆಗುತ್ತಿರಲಿಲ್ಲ. ಮಹಾಶಿವನಿಗಿಂತ, ಚೆಲುವೆಯಾಗಿರುವ ಉತ್ತಮ ವರನು ತನ್ನ ಮಗಳಿಗೆ ಸಿಗುತ್ತಿತ್ತು ಎಂಬ ಆಸೆಯಲ್ಲಿದ್ದನು. 

ತನ್ನ ತಂದೆಯು ಯಾಗವೊಂದನ್ನು ಆಯೋಜಿಸಿರುವ ವಿಚಾರವನ್ನು ಅರಿತ ದಾಕ್ಷಾಯಿಣಿಯು ಶಿವನೊಂದಿಗೆ ಈ ಯಾಗಕೂಟದಲ್ಲಿ ಭಾಗಿಯಾಗೋಣವೆಂದು ಒತ್ತಾಯಿಸುವಳು. ಆದರೆ ಶಿವನು ತಮಗೆ ಆಹ್ವಾನವಿಲ್ಲದಿರುವುದರಿಂದ ಯಜ್ಞಕ್ಕೆ ಹೋಗುವುದು ಸಮಂಜಸವಲ್ಲ ಎನ್ನುವನು.ಕೊನೆಗೆ ದಾಕ್ಷಾಯಿಣಿಯು ತನ್ನ ತಂದೆಯ ಮನೆಗೆ ಹೋಗುವೆನೆಂದು ಹೇಳಿ ಮಹಾಶಿವನನ್ನು ಬಿಟ್ಟು ದಕ್ಷನ ಯಜ್ಞ ಕ್ಷೇತ್ರಕ್ಕೆ ಹೋಗುವಳು. ತನ್ನ ಮಗಳು ತನ್ನ ಯಜ್ಞ ಕ್ಷೇತ್ರಕ್ಕೆ ಬಂದಿರುವುದನ್ನು ಗಮನಿಸಿದ ದಕ್ಷನು ನೋಡಿಯೂ ನೋಡದಂತೆ ನಿರ್ಲಕ್ಷ್ಯ ಧೋರಣೆ ತಾಳುವನು. ಮಾತ್ರವಲ್ಲ, ಆ ಯಜ್ಞಕ್ಕೆ ಬಂದ ಸರ್ವರೂ ಕೂಡಾ ದಕ್ಷ ಮಹಾರಾಜನ ಅಣತಿಯಂತೆ ದಾಕ್ಷಾಯಿಣಿಯನ್ನು ನಿರ್ಲಕ್ಷಿಸಿ ಅವಮಾನ ಮಾಡುವರು. ಇದರ ಜೊತೆಗೆ ಯಜ್ಞಕುಂಡದಲ್ಲಿ ಮಹಾಶಿವನನ್ನು ಅವಮಾನಿಸುವ ನಾನಾ ಕ್ರಿಯೆಗಳನ್ನು ದಕ್ಷನು ಮಾಡಿಸುವನು. ಮಹಾಶಿವನನ್ನು ಅವಮಾನಿಸುವ ಇಂತಹ ಸಾಲುಸಾಲು ಘಟನೆಗಳು ನಡೆದಾಗ ಇದರಿಂದ ತೀವ್ರ ಮುಜುಗರಕ್ಕೊಳಗಾದ ದಾಕ್ಷಾಯಿಣಿಯು ಅಲ್ಲಿಯೇ ಇದ್ದ ಯಜ್ಞಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುವಳು.

ಶೈಲಪುತ್ರಿಯನ್ನು ಆದಿಶಕ್ತಿಯೆಂದು ಪರಿಗಣಿಸಲಾಗುತ್ತದೆ. ಶೈಲಪುತ್ರಿಯು ಗೂಳಿಯ ಮೇಲೆ ಸವಾರಿ ಮಾಡುತ್ತಿದ್ದ ಕಾರಣ ಅವಳನ್ನು ವೃಷರುಧ ಎಂದೂ ಕೂಡಾ ಕರೆಯಲಾಗುತ್ತದೆ. ಶೈಲಪುತ್ರಿಯು ಮನೋಕಾರಕನಾದ ಚಂದ್ರನನ್ನು ತನ್ನ ಮಸ್ತಿಷ್ಕದ ಮೇಲೆ ಧರಿಸಿರುವಳು. ತಮೋಗುಣದ ಸಂಕೇತವಾದ ತ್ರಿಶೂಲವನ್ನು ತನ್ನ ಬಲಗೈಯಲ್ಲಿ ಧಾರಣೆ ಮಾಡಿದ್ದು, ಶ್ವೇತ ವಸ್ತ್ರಧಾರಿಯಾಗಿರುವ ಶೈಲ ಪುತ್ರಿಯು ಮಲ್ಲಿಗೆ ಹೂವಿನ ಪ್ರಿಯಳು ಆಗಿರುವಳು. ಶೈಲಪುತ್ರಿಯ ಸ್ವರೂಪವೂ ನಾವು ನಮ್ಮ ಬದುಕಿನಲ್ಲಿ ಪಾಲಿಸಬೇಕಾದ ಜೀವನ ತತ್ವವನ್ನು ಸೂಚಿಸುತ್ತದೆ. ಶ್ವೇತ ವಸ್ತ್ರದಲ್ಲಿರುವ ಆಕೆಯು ನಮ್ಮ ಚಿತ್ತದಲ್ಲಿ ಶಾಂತಿಯುತವಾದ ನಡವಳಿಕೆಯನ್ನು ವೃದ್ಧಿಸಿಕೊಳ್ಳಲು ಪ್ರೇರಣೆ ನೀಡುವಳು. ಪರ್ವತರಾಜನ ಮಗಳಾಗಿರುವುದರಿಂದ ಪ್ರಕೃತಿಯನ್ನು ಪ್ರೀತಿಸುವುದರ ಮೂಲಕ ನಮ್ಮ ಮನೋಭಾವನೆಯನ್ನು ಶುದ್ಧಮಯವಾಗಿರಿಸಬೇಕೆಂದು ಸೂಚಿಸುವಳು. ಹಾಗೆಯೇ ಗೂಳಿಯ ಮೇಲೆ ಕುಳಿತಿರುವ ಮೂಲಕ ಮೂಕ ಪ್ರಾಣಿಗಳೆಲ್ಲವೂ ದೇವ ಮತ್ತು ದೇವತೆಯರ ವಾಹನಗಳಾಗಿದ್ದು ಅವುಗಳನ್ನು ಹಿಂಸಿಸಬಾರದೆಂಬುದರ ಸಂಕೇತವನ್ನು ಸೂಚಿಸುತ್ತದೆ. ಹಾಗೇ ಒಂದು ಕೈಯಲ್ಲಿ ಹಿಡಿದಿರುವ ತ್ರಿಶೂಲವು ನಮ್ಮ ಬದುಕಿನ ನಾನಾ ತಾಪತ್ರಯಗಳನ್ನು ನಿವಾರಣೆ ಮಾಡುವುದರ ಸೂಚಕವಾಗಿರುವುದರ ಜೊತೆಗೆ ನಮ್ಮ ಮನಸ್ಸನ್ನು ದುಷ್ಟ ಕ್ರಿಯೆಗಳತ್ತ ಇಡಬಾರದೆಂಬುವುದನ್ನು ಸೂಚಿಸುತ್ತದೆ. ಮಾತ್ರವಲ್ಲ, ಆ ತ್ರಿಶೂಲಾಸ್ತ್ರವು ದುಷ್ಟ ಮನೋಕಾಮನೆಗಳುಳ್ಳವರ ಸಂಹಾರದ ಸೂಚಕವೂ ಹೌದು. ಹಾಗೆಯೇ ಮತ್ತೊಂದು ಕೈಯಲ್ಲಿ ಹಿಡಿದಿರುವ ಕಮಲವು ನಮ್ಮ ಬದುಕಿನಲ್ಲಿನ ವಿನಯತೆ ಮತ್ತು ತಾಳ್ಮೆಯ ಮಹತ್ವದ ಸಾರವನ್ನು ಅರ್ಥೈಸಿಕೊಡುತ್ತದೆ. ಹಾಗಾಗಿ ಶೈಲಪುತ್ರಿಯ ಆರಾಧನೆಯು ನಮ್ಮ ಮನಸ್ಸಿನಲ್ಲಿನ ತಳಮಳವನ್ನು ದೂರ ಮಾಡುತ್ತದೆ. ಹಾಗಾಗಿ ದೇವಿಯ ನಾನಾ ರೂಪಗಳನ್ನು ಹೆಣ್ಣಿನ ಶಕ್ತಿಯೆಂದು ಪರಿಗಣಿಸಿ ಪೂಜಿಸಬೇಕಾಗುತ್ತದೆ.

"ಪುರಾಣಗಳು ಹೇಳುವಂತೆ :-" 


- ಶೈಲಪುತ್ರಿಯ ಆರಾಧನೆಯಿಂದ ನಮ್ಮ ಮನೋಭಾವನೆಯನ್ನು ನಿಯಂತ್ರಿಸುವಳು.

- ಶೈಲಪುತ್ರಿಯು ಸಹನೆಯ ಪ್ರತೀಕಳಾಗಿರುವಳು.

- ಶೈಲಪುತ್ರಿಯು ಮೂಲಧಾರ ಚಕ್ರದಲ್ಲಿ ಯೋಗಿನಿಯಾಗಿ ನೆಲೆಗೊಂಡಿದ್ದಾಳೆ. ಮೂಲಾಧಾರ ಚಕ್ರವು ಬೆನ್ನು ಹುರಿಯ ಕೆಳಗಿದ್ದು ಸುಪ್ತ ಚೈತನ್ಯದ ಮೂಲ ಬಿಂದುವಾಗಿದ್ದು ಕುಂಡಲಿನಿ ಶಕ್ತಿಯ ಜಾಗೃತ ಸ್ಥಾನವಾಗಿದೆ.

- ಆಧ್ಯಾತ್ಮ ಜ್ಞಾನ ಸಾಧನೆಗೆ ದೇವಿಯ ಆರಾಧನೆ ಮೊದಲ ಹೆಜ್ಜೆ. 

- ನಮ್ಮ ಮನಸ್ಸು ಚಂಚಲ ಸ್ವಭಾವದ್ದಾಗಿದ್ದರೆ ನಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಪ್ರೇರಣೆ ನೀಡುತ್ತದೆ.

- ಶೈಲಪುತ್ರಿಯ ಆರಾಧನೆಯಿಂದ ನಮಗೆ ಮನೋಬಲ, ಶೌರ್ಯ ಮತ್ತು ಇಂದ್ರಿಯ ನಿಗ್ರಹ ಶಕ್ತಿ ಬರುತ್ತದೆ.


ಹೆಣ್ಣು ಮಕ್ಕಳ ಸಂಪೂರ್ಣ ಜೀವನ ಚಕ್ರವೇ ನವದುರ್ಗೆಯ🌷 ಒಂಭತ್ತು  ರೂಪಗಳು.❤️

 1. ಹೆರಿಗೆಯಾಗಿ ಹುಟ್ಟಿದ ಹೆಣ್ಣು ಮಗುವು "ಶೈಲಪುತ್ರಿ" ರೂಪದಲ್ಲಿರುತ್ತಾಳೆ.

 2. ಕನ್ಯತ್ವದ ಹಂತದವರೆಗೂ "ಬ್ರಹ್ಮಚಾರಿಣಿ" ರೂಪದಲ್ಲಿರುತ್ತಾಳೆ. 

3. ಮದುವೆಗೆ ಮುಂಚೆ ಚಂದ್ರನಂತೆ ಪರಿಶುದ್ಧಳಾಗಿರುವ ಇವಳು "ಚಂದ್ರಘಂಟಾ"  ಆಗಿರುತ್ತಾಳೆ. 

4. ಮದುವೆಯ ನಂತರ ಅವಳು ಹೊಸ ಜೀವಿಗೆ ಜನ್ಮ ನೀಡಲು ಗರ್ಭಧರಿಸಿರುವಾಗ,  "ಕೂಷ್ಮಾಂಡಾ" ರೂಪದಲ್ಲಿರುತ್ತಾಳೆ. 

5. ಮಗುವಿಗೆ ಜನ್ಮ ನೀಡಿದ ನಂತರ ಅದೇ ಮಹಿಳೆಯು "ಸ್ಕಂದಮಾತೆ" ಆಗುತ್ತಾಳೆ.

6. ಸ್ವಯಂ ಸಂಯಮ ಮತ್ತು ಧ್ಯಾನವನ್ನು ಅಭ್ಯಾಸ ಮಾಡುವ ಮಹಿಳೆ "ಕಾತ್ಯಾಯನಿ" ರೂಪವಾಗುತ್ತಾಳೆ. 

7. ಪತಿಯ ಅಕಾಲಿಕ ಮರಣವನ್ನೂ ತನ್ನ  ಸಂಕಲ್ಪದಿಂದ ಜಯಿಸಿ ಅಥವಾ ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿ ದುಷ್ಟರನ್ನು ಎದುರಿಸಲು "ಕಾಳರಾತ್ರಿ" ಆಗುತ್ತಾಳೆ 

8. ಜಗತ್ತಿಗೆ ಒಳ್ಳೆಯದನ್ನು ಬಯಸಿ, ಮಾಡುವುದರಿಂದ (ಅವರಿಗೆ ಕುಟುಂಬವೇ ಪ್ರಪಂಚ) "ಮಹಾ ಗೌರಿ" ಆಗುತ್ತಾಳೆ. 

9. ಭೂಮಿಯನ್ನು ತೊರೆದು ಸ್ವರ್ಗಕ್ಕೆ ಹೋಗುವ ಮೊದಲು, ಅವಳು ತನ್ನ ಮಕ್ಕಳಿಗೆ ಇಹಲೋಕದಲ್ಲಿ ಯಶಸ್ಸನ್ನು (ಎಲ್ಲಾ ಸುಖ ಮತ್ತು ಸಂಪತ್ತನ್ನು) ಅನುಗ್ರಹಿಸುವ "ಸಿದ್ಧಿದಾತ್ರಿ" ಆಗುತ್ತಾಳೆ. 

ಇದನ್ನೇ ಒಂಭತ್ತು ದಿನಗಳ ಕಾಲ ನೆನೆದು ಆಚರಿಸುವ ಪದ್ಧತಿ. ನಮ್ಮೆಲ್ಲ ಹೆಣ್ಣು ಮಕ್ಕಳಿಗೂ ಈ ಎಲ್ಲ ಗುಣಗಳ ಅರಿವಾಗಿ, ಅದರಂತೆ ನಡೆದುಕೊಳ್ಳುವ ಮೂಲಕ ಪ್ರತಿ ಮನೆಯಲ್ಲೂ ನೆಮ್ಮದಿ ಮೂಡಲಿ, ಶುಭಮಸ್ತು 

Posted 15/10/2023



No comments:

Post a Comment